ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 73ರ ಉಜಿರೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿಯನ್ನು ಸಂಪರ್ಕಿಸುವ ಉಜಿರೆಯಿಂದ ಪೆರಿಯಶಾಂತಿಯವರೆಗಿನ 30 ಕಿಲೋಮೀಟರ್ ವ್ಯಾಪ್ತಿಯ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಅಧಿಕೃತವಾಗಿ ಮೇಲ್ದರ್ಜೆಗೇರಿದೆ.
ರಾಜ್ಯ ಹೆದ್ದಾರಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ರಸ್ತೆ ಹಸ್ತಾಂತರ ಪ್ರಕ್ರಿಯೆಯ ನೋಟಿಫಿಕೇಶನ್ ಕಾರ್ಯಗಳು ನಡೆಯುತ್ತಿದ್ದು, ರಾ.ಹೆ 73ರ ಸ್ಪರ್ ರಸ್ತೆಯಾಗಿ ಉಜಿರೆ-ಪೆರಿಯಶಾಂತಿ ರಸ್ತೆ ಕಾಣಿಸಿಕೊಂಡಿದೆ. ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದಿಂದ ಅಧಿಕೃತವಾಗಿ ಮಾಹಿತಿ ಹೊರ ಬಿದ್ದಿದೆ. ಈ ಮೂಲಕ ರಾ.ಹೆ ಆಗುತ್ತದೆಯೇ ಇಲ್ಲವೇ ಎನ್ನವ ಸಾರ್ವಜನಿಕ ಚರ್ಚೆಗೆ ತೆರೆ ಎಳೆದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಪರ್ ಎಂಬ ಯೋಜನೆಯ ಮೂಲಕ ಈ ರಸ್ತೆಗೆ ಮುಂದಿನ ದಿನಗಳಲ್ಲಿ ಅನುದಾನಗಳು ದೊರಕಲಿದ್ದು ಮುಂದಿನ ದಿನಗಳಲ್ಲಿ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುಸಜ್ಜಿತ ರಸ್ತೆಯ ಪ್ರಯಾಣ ಸಂತಸ ನೀಡಲಿದೆ.
ಐತಿಹಾಸಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಯಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ಒಂದು ರಾ.ಹೆದ್ದಾರಿಯಿಂದ ಇನ್ನೊಂದು ರಾ.ಹೆದ್ದಾರಿಯನ್ನು ಸಂಪರ್ಕಿಸುವ ಅಥವಾ ಒಂದು ಪ್ರಮುಖ ರಸ್ತೆಯಿಂದ ಇನ್ನೊಂದು ಪ್ರಮುಖ ರಸ್ತೆಗೆ ಸಂಪರ್ಕಿಸುವ, ಒಳ ದಾರಿಗಳು ಅಥವಾ ಸಮೀಪದ ದಾರಿಗಳನ್ನು ಮೇಲ್ದರ್ಜೆಗೇರಿಸಿಕೊಂಡು ಅವುಗಳಿಗೆ ಸಮರ್ಪಕವಾದ ಅನುದಾನವನ್ನು ಒದಗಿಸಿಕೊಂಡು ಅವುಗಳನ್ನು ಕೂಡ ರಾಷ್ಟ್ರೀಯ ಹೆದ್ದಾರಿ ಮಾದರಿಯ ರಸ್ತೆಯಂತೆ ಸುಸಜ್ಜಿತವಾಗಿ ನಿರ್ಮಾಣ ಮಾಡುವುದು ಈ ಸ್ಪರ್ ಯೋಜನೆಯ ಪ್ರಮುಖ ಉದ್ದೇಶ. ಇತಿಹಾಸ ಪ್ರಸಿದ್ಧ ದೇವಾಲಯಗಳು, ತೀರ್ಥಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ಈಗಾಗಲೇ ಕೆಲವು ಕಡೆ ಈ ರೀತಿಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಪ್ರಮುಖವಾಗಿ ಇರಿಸಿಕೊಂಡು ಈ ಯೋಜನೆಯನ್ನು ಈ ಪ್ರದೇಶಕ್ಕೆ ತರಲಾಗಿದೆ.
ಚತುಷ್ಪಥವೊ ದ್ವಿಪಥವೊ
ಉಜಿರೆಯಿಂದ ಧರ್ಮಸ್ಥಳದವರೆಗೆ ಚತುಷ್ಪಥ ರಸ್ತೆಯ ಬೇಡಿಕೆ ಇದ್ದು, ಧರ್ಮಸ್ಥಳ ನಿಡ್ಲೆ ಕೊಕ್ಕಡ ಮಾರ್ಗವಾಗಿ ಪೆರಿಯ ಶಾಂತಿಯವರೆಗೆ 10 ಮೀಟರ್ ಅಗಲದ ರಸ್ತೆ ನಿರ್ಮಾಣದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಆದರೆ ಇದರ ನಿರ್ಧಾರ ಕೇಂದ್ರ ಸರ್ಕಾರದ ಮೇಲಿದ್ದು ಸಂಚಾರ ದಟ್ಟಣೆಯ ಆದ್ಯತೆಯ ಮೇರೆಗೆ ಯಾವ ಪಥದ ರಸ್ತೆ ನಿರ್ಮಾಣವಾಗಬೇಕೆಂದು ತೀರ್ಮಾನವಾಗಲಿದೆ. ಧರ್ಮಸ್ಥಳದಿಂದ ಪೆರಿಯ ಶಾಂತಿವರೆಗೆ ಅರಣ್ಯ ಇಲಾಖೆಗೆ ಸೇರಿದ ಜಾಗಗಳೇ ಇರುವುದರಿಂದ ಅಲ್ಪ ಪ್ರಮಾಣದ ಮರಗಳ ತೆರವು ಕಾರ್ಯವು ಇಲ್ಲಿ ನಡೆಯಬಹುದು. ಆದರೆ ಸುಸಜ್ಜಿತ ರಸ್ತೆಗೆ ಇದು ಅನಿವಾರ್ಯ. ಪ್ರಸ್ತುತ ಲೋಕಪಯೋಗಿ ಇಲಾಖೆಯ ಅಧೀನದಲ್ಲಿರುವ ಈ ರಸ್ತೆಯ ಧರ್ಮಸ್ಥಳದಿಂದ ಪೆರಿಯ ಶಾಂತಿಯವರೆಗಿನ ದುರಸ್ತಿ ಕಾರ್ಯಕ್ಕೆ ಪ್ರಸಕ್ತ ವರ್ಷದಲ್ಲಿ ಅನುದಾನ ದೊರೆತಿದ್ದು ಟೆಂಡರ್ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ಸ್ವಾಧೀನಕ್ಕೆ ತೆಗೆದುಕೊಂಡಾಗ ಮುಂದಿನ ಎಲ್ಲಾ ರಸ್ತೆ ಕಾಮಗಾರಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ನೋಡಿಕೊಳ್ಳಲಿದೆ.
ಮುಂದಿನ ದಿನಗಳಲ್ಲಿ ಧರ್ಮಸ್ಥಳ ಸುಬ್ರಹ್ಮಣ್ಯ ಮಂಗಳೂರು ಬೆಂಗಳೂರು ಉಡುಪಿ ಸೋಲಾಪುರ ಪ್ರದೇಶಕ್ಕೆ ತೆರಳುವ ಪ್ರಯಾಣಿಕರಿಗೆ ಈ ರಸ್ತೆ ಅಗಲೀಕರಣದಿಂದ ಬಹುದೊಡ್ಡ ಲಾಭವಾದಿತು.