ಕಳಂಜ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ಭೇಟಿ; ಸರಕಾರಿ ಜಾಗ ಅತಿಕ್ರಮಣದ ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆ

ಶೇರ್ ಮಾಡಿ

ಕಳೆಂಜ: ಕಳೆಂಜ ಗ್ರಾಮದ ಕೆಲವೆಡೆ ಸರಕಾರಿ ಜಾಗ ಅತಿಕ್ರಮಣದ ಮಾಹಿತಿ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ ವಿ ಅ.19ರಂದು ಸಂಜೆ ಕಳೆಂಜ ಗ್ರಾಮದ ವಿವಿಧ ಕಡೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ಸ್ಮಶಾನಕ್ಕೆ ಮೀಸಲಿಟ್ಟ ಸುಮಾರು ಒಂದು ಎಕರೆ ಜಾಗದಲ್ಲಿ 30 ಸೆಂಟ್ಸ್ ಹಾಗೂ 40 ಸೆಂಟ್ಸ್ ಅಂದಾಜಿನಲ್ಲಿ ಸ್ಥಳೀಯ ಇಬ್ಬರು ಅತಿಕ್ರಮಣ ನಡೆಸಿದ್ದು ಇದರಿಂದ ಸ್ಮಶಾನ ನಿರ್ಮಾಣಕ್ಕೆ ತೊಡಕಾಗಿದ್ದು, 70 ಸೆಂಟ್ಸ್ ಜಾಗ ಒತ್ತುವರಿಯಾಗಿದೆ ಎಂದು ಗ್ರಾಮಸ್ಥರಿಂದ ಅನೇಕ ಬಾರಿ ದೂರುಗಳು ಕೇಳಿ ಬರುತ್ತಿದ್ದವು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಒತ್ತುವರಿ ಆದ ಜಾಗವನ್ನು ಹಿಂಪಡೆಯುವಲ್ಲಿ ಕಾರ್ಯಪ್ರವೃತ್ತರಾಗಲು ಸೂಚಿಸಿದರು. ಅಲ್ಲದೆ ಸರಕಾರಿ ಜಾಗವನ್ನು ಯಾವ ಖಾಸಗಿ ವ್ಯಕ್ತಿಗೂ ಅತಿಕ್ರಮ ಮಾಡಲು ಬಿಡುವುದಿಲ್ಲ ಎಂದು ಈ ಸಂದರ್ಭ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಕಾಯರ್ತಡ್ಕದ ಗಾಳಿತೋಟ ಎಂಬಲ್ಲಿ ಬಂಡೇರಿ ರಸ್ತೆಗೆ ತಾಗಿಕೊಂಡು ಗ್ರಾಮಮಟ್ಟದ ಆರೋಗ್ಯ ಕೇಂದ್ರದ ಸ್ಥಾಪನೆಗೆ ಈಗಾಗಲೇ ಒಂದು ಎಕರೆ ಜಾಗ ಮಂಜೂರು ಗೊಂಡಿದ್ದು ಅಲ್ಲಿಯೂ 60 ಸೆಂಟ್ಸ್ ನಷ್ಟು ಜಾಗ ಅತಿಕ್ರಮಣದ ವಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಸರ್ವೆ ನಡೆಸಿ ಅತಿಕ್ರಮಣ ಗೊಂಡಿರುವ ಜಾಗವನ್ನು ಬಿಡಿಸಿ ಕೊಡುವಂತೆ ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ ಶಾಲೆಯ ತರಗತಿಗೆ ತೆರಳಿ ಸುಮಾರು ಒಂದು ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ತರಗತಿಯನ್ನು ನಡೆಸಿದರು. ಅಲ್ಲದೆ ಶಾಲೆಯಲ್ಲಿ ತಯಾರಾದ ಮಕ್ಕಳಿಗೆ ತಯಾರಿಸಿದ ಬಿಸಿಯೂಟವನ್ನು ಸವಿದರು.
ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸನ್ನ ಎ ಪಿ., ರುದ್ರಭೂಮಿ ಸಮಿತಿ ಅಧ್ಯಕ್ಷ ಸಂಜೀವ ಕುಂಬಾರ, ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ, ಗ್ರಾಮಕರಣಿಕ ಪೃಥ್ವೀಶ್, ತಾಲೂಕು ಸರ್ವೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಜೊತೆಗಿದ್ದರು.

Leave a Reply

error: Content is protected !!