ಮೂರು ಕೋಟಿ ರೂ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ ಬೈತಡ್ಕ – ಗುಜ್ಜರ್ಮೆ ರಸ್ತೆಯ ಉದ್ಘಾಟನೆ
25 ಲಕ್ಷ ರೂ ವೆಚ್ಚದ ಗ್ರಾ.ಪಂ ಸಭಾ ಭವನ ಉದ್ಘಾಟನೆ.
ಗ್ರಾ.ಪಂ ಕಛೇರಿ ಎದುರು 2.5ಲಕ್ಷ ರೂ ವೆಚ್ಚದಲ್ಲಿ ಹಾಸಲಾದ ಇಂಟರ್ ಲಾಕ್ ಉದ್ಘಾಟನೆ.

ಕಾಣಿಯೂರು: ಅಡಿಕೆಗೆ ಈಗಾಗಲೇ ಹಳದಿ ರೋಗ ಪ್ರಾರಂಭವಾಗಿದೆ, ಅದರ ಬೆನ್ನಿಗೆ ಎಲೆ ಚುಕ್ಕಿ ರೋಗ ವ್ಯಾಪವಾಗುತ್ತಿದೆ, ಇದರಿಂದಾಗಿ ರೈತರು ಕಂಗಾಲಾಗಿದ್ದು, ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ನನ್ನ ನೇತೃತ್ವದಲ್ಲಿ ಸಂಬಂಧಪಟ್ಟ ವಿಜ್ಞಾನಿಗಳನ್ನೊಳಗೊಂಡ ಅಧ್ಯಯನ ಸಮಿತಿಯನ್ನು ರಚಿಸಿದೆ.
ದೇಶದ ವಿವಿಧ ಭಾಗಗಳಲ್ಲಿ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದ್ದು, ಶೀಘ್ರವೇ ರೋಗಕ್ಕೆ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಇಂದು(ಅ.27) ರಂದು ಮೂರು ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ ಬೈತಡ್ಕ – ಗುಜ್ಜರ್ಮೆ ರಸ್ತೆ ಉದ್ಘಾಟಿಸಿದ ಬಳಿಕ ಕಾಣಿಯೂರಿನಲ್ಲಿ ಕಾಣಿಯೂರು ಗ್ರಾ. ಪಂಚಾಯಿತಿ ಸಭಾ ಭವನ ಕಟ್ಟಡ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅಡಿಕೆ ಹಾನಿಕಾರಕವಲ್ಲ ಎಂದು ಮನವರಿಗೆ ಮಾಡಿರುವುದಲ್ಲದೆ, ಸರಕಾರ ಸುಪ್ರೀಂಕೋರ್ಟ್‌ಗೆ ಮನದಟ್ಟು ಮಾಡುವ ಕಾರ್ಯವನ್ನು ಮಾಡಿದೆ. ಆದರೂ ರೈತರು ಅಡಿಕೆಗೆ ಪರ್ಯಾಯವಾದ ಬೆಳೆಯನ್ನು ಬೆಳೆದು ದೇಶ ಅಡುಗೆ ಬಳಕೆಯ ತೈಲೋತ್ಪನ್ನದಲ್ಲಿ ಸ್ವಾವಲಂಬಿಯಾಗುವಲ್ಲಿ ಸಹಕರಿಸಬೇಕು ಎಂದರು.
ಬಂದರು, ಮೀನುಗಾರಿಕೆ, ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮೀಣ ಭಾಗದ ರಸ್ತೆಗಳಿಗೆ ಕಾಯಕಲ್ಪ ಆಗಿದೆ. ಸುಳ್ಯ ವಿಧಾನ ಸಭಾ ಕೇತ್ರಕ್ಕೆ ಹೆಚ್ಚು ಅನುದಾನ ನೀಡಿ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದರು.
ಕಡಬ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಕಾರಿ ನವೀನ್ ಕುಮಾರ್ ಭಂಡಾರಿ. ಕಾಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ದರ್ಖಾಸು, ಪಿಡಿಒ ಎಂ. ದೇವರಾಜ್, ಸದಸ್ಯರಾದ ವಿಶ್ವನಾಥ ಕೊಪ್ಪ, ಪ್ರವೀಣ್ ಚಂದ್ರ ರೈ , ವಸಂತ ಪೆರ್ಲೋಡಿ, ಸುಲೋಚನಾ ಮಿಯ್ಯೊಳ್ಪೆ, ದೇವಿ ಪ್ರಸಾದ್ ದೋಳ್ಪಾಡಿ, ಮೀರಾ, ಸುನಂದ, ತಾರಾನಾಥ ಇಡ್ಯಡ್ಕ, ಗಂಗಮ್ಮ , ಅಂಬಾಕ್ಷಿ, ಕೀರ್ತಿಕುಮಾರಿ, ಲೋಕಯ್ಯ ದೋಲ್ಪಾಡಿ, ತೇಜಕುಮಾರಿ ಉಪಸ್ಥಿತರಿದ್ದರು.
ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ ಪ್ರಸ್ತಾವನೆಗೈದು, ಸ್ವಾಗತಿಸಿದರು.ರಾಮಣ್ಣ ಗೌಡ ಮುರಂಜ ವಂದಿಸಿದರು. ಧನಂಜಯ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು.




