ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಿಗೆ ಮಜಲಿನಿಂದ ಸೌತಡ್ಕಕ್ಕೆ ಸಂಪರ್ಕಿಸುವ ಪಂಚಾಯತ್ ರಸ್ತೆಯನ್ನು ಸ್ಥಳೀಯ ನಿವಾಸಿಗಳೇ ಖರ್ಚು ಮಾಡಿ ಸರಿಪಡಿಸಿದ ಘಟನೆ ಅಕ್ಟೋಬರ್ 30ರಂದು ನಡೆದಿದೆ.
ಇಲ್ಲಿನ ಮಲ್ಲಿಗೆ ಮಜಲಿನಿಂದ ಸೌತಡ್ಕಕ್ಕೆ ಹೋಗುವ ಪಂಚಾಯತ್ ರಸ್ತೆಯು ತೀರಾ ಹದಗೆಟ್ಟಿದ್ದು ಹಲವು ಬಾರಿ ಪಂಚಾಯಿತಿಗೆ ಹಾಗೂ ವಾರ್ಡ್ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ.
ಮಳೆಯ ಸಂದರ್ಭ ಮಳೆಯ ನೆಪವೊಡ್ಡಿ ದುರಸ್ತಿ ಕಾರ್ಯವನ್ನು ಪಂಚಾಯತ್ ಜನಪ್ರತಿನಿಧಿಗಳು ಮುಂದೂಡುತ್ತಿದ್ದರು. ಇದೀಗ ಮಳೆ ನಿಂತರು ಕೂಡ ತಾತ್ಕಾಲಿಕವಾಗಿಯಾದರೂ ರಸ್ತೆಯ ಅಭಿವೃದ್ಧಿ ಸದಸ್ಯರ ಗಮನಕ್ಕೆ ಬಾರದ ಹಿನ್ನೆಲೆ ಸ್ಥಳೀಯ ನಿವಾಸಿಗಳೇ ದುರಸ್ತಿ ಕಾರ್ಯ ಕೈಗೆತ್ತಿಕೊಂಡರು.
ಪ್ರತಿ ಬಾರಿಯೂ ಕೇವಲ ಮೌಖಿಕ ಭರವಸೆಗಳೇ ಜನಪ್ರತಿನಿಧಿಗಳಿಂದ ದೊರಕುತ್ತಿದ್ದ ಕಾರಣ ಬೇಸತ್ತು ಸ್ಥಳೀಯ ನಿವಾಸಿಗಳಾದ ಸಲೀಂ ಮಲ್ಲಿಗೆಮಜಲು, ಅಝೀಜ್. ಎಂ ಎಸ್, ನೌಫಲ್ ಎಮ್ ಎಚ್., ಹೈದರ್ ಮಲ್ಲಿಗೆಮಜಲು, ಹಮೀದ್ ಎಂ ಎಸ್., ಅಶ್ರಫ್ ಎಮ್ ಎಚ್ ಮೊದಲಾದವರು ಹಿಟಾಚ್ ಮೂಲಕ ಹೊಂಡಗಳನ್ನು ಮುಚ್ಚಿ ಸಂಚಾರ ಯೋಗ್ಯವಾದ ರಸ್ತೆಯನ್ನಾಗಿ ಮಾಡಿದರು.
ಅಲ್ಲದೆ ಸ್ಥಳೀಯ ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಆಕ್ರೋಶಗೊಂಡರು. ಚುನಾವಣೆ ಸಂದರ್ಭದಲ್ಲಿ ಹಲವು ಆಮಿಷಗಳನ್ನು ಒಡ್ಡಿ ಮತ ಪಡೆದು ಪಂಚಾಯಿತಿನಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ, ಬಳಿಕ ವಾರ್ಡಿನ ಅಭಿವೃದ್ಧಿಯನ್ನು ಮರೆತುಬಿಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.