ಪೊಲೀಸ್ ಕಾನ್ಸ್‌ಟೇಬಲ್ ಅರ್ಜಿಗೆ ವಯೋಮಿತಿಯಲ್ಲಿ 2 ವರ್ಷ ವಿನಾಯಿತಿ.
ಕೋವಿಡ್ ಹಿನ್ನೆಲೆಯಿಂದ ಆಕಾಂಕ್ಷಿ ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿದ ಸರ್ಕಾರ.
ಎಲ್ಲ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 2 ವರ್ಷ ವಿನಾಯಿತಿ.
ಕರ್ನಾಟಕ ಪೊಲೀಸ್ ಇಲಾಖೆಯ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್, ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಲ್ಲಿ ಆಕಾಂಕ್ಷಿ ಇರುವ ಅಭ್ಯರ್ಥಿಗಳಿಗೆ ಸರ್ಕಾರ ಬಿಗ್ ಗುಡ್ ನ್ಯೂಸ್ ನೀಡಿದೆ.
ಕಳೆದ ಮೂರು ವರ್ಷಗಳಿಂದ ಕೋವಿಡ್-19 ನಿಂದಾಗಿ ನಿಯಮಿತವಾಗಿ ನೇಮಕಾತಿ ನಡೆಯದ ಪ್ರಯುಕ್ತ ಆಕಾಂಕ್ಷಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ವಂಚಿತವಾಗಿರುವುದರಿಂದ ವಯೋಮಿತಿಯಲ್ಲಿ 02 ವರ್ಷಗಳ ವಿನಾಯಿತಿಯನ್ನು, ಒಂದು ಬಾರಿಗೆ ಮಾತ್ರ ನೀಡಲು ಹಲವು ಮನವಿಗಳು ಸ್ವೀಕೃತವಾಗಿದ್ದವು. ಆದ್ದರಿಂದ ಈ ಮನವಿಗಳಿಗೆ ಸರ್ಕಾರ ಸ್ಪಂದಿಸಿ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ಸಾವಿರಾರು ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.
2022-23ನೇ ಸಾಲಿನಲ್ಲಿ ಕರೆದಿರುವ 3484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ 1591 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ವಯೋಮಿತಿ ಹೆಚ್ಚಳ ನಿಯಮ ಅನ್ವಯವಾಗಲಿದ್ದು, ಪ್ರತಿ ಕೆಟಗರಿ ಅಭ್ಯರ್ಥಿಗಳಿಗೆ 2 ವರ್ಷ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ವಯೋಮಿತಿ ವಿನಾಯಿತಿ ಪ್ರಕಾರ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ / ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಅಭ್ಯರ್ಥಿಗಳಿಗೆ 25 ವರ್ಷ ದಿಂದ 27 ವರ್ಷದವರೆಗೆ, ಎಸ್‌ಸಿ / ಎಸ್‌ಟಿ / ಒಬಿಸಿ ಅಭ್ಯರ್ಥಿಗಳಿಗೆ 27 ವರ್ಷದಿಂದ 29 ವರ್ಷದವರೆಗೆ, ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 30 ವರ್ಷದಿಂದ 32 ವರ್ಷದವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
3484 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಒಂದು ತಿಂಗಳ ಕಾಲಮಿತಿಯನ್ನು ವಿಸ್ತರಣೆ ಮಾಡಿದ್ದು, ಆಸಕ್ತರು ಮೇಲಿನ ವಯಸ್ಸಿನ ಅರ್ಹತೆ ಅನ್ವಯದಂತೆ ಅರ್ಜಿ ಸಲ್ಲಿಸಲು ನವೆಂಬರ್ 30 ರವರೆಗೆ ಅವಕಾಶ ನೀಡಲಾಗಿದೆ.
1591 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಒಂದು ವಾರ ಮುಂದಕ್ಕೆ ವಿಸ್ತರಣೆ ಮಾಡಿದ್ದು ದಿನಾಂಕ 22-11-2022 ರ ಬದಲಾಗಿ ದಿನಾಂಕ 28-11-2022 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.