ಪುತ್ತೂರು: ಹಲವು ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳ ಮೂಲಕ ಗುರುತಿಸಿ ಕೊಂಡಿರುವ ಪುತ್ತೂರು ಕ್ರಾಕರ್ಸ್ ತಂಡ ದೀಪಾವಳಿ ನಿಮಿತ್ತ ವ್ಯಾಪಾರದಲ್ಲಿ ತೊಡಗಿಸಿ ಕೊಂಡಿರುವ ಸಂದರ್ಭದಲ್ಲಿ ಸಹಾಯದ ನಿರೀಕ್ಷೆಯಲ್ಲಿದ್ದ ಕೆಲ ಬಡವರನ್ನು ಗುರುತಿಸಿ ಸರಳ ಸಮಾರಂಭದ ಮೂಲಕ ಸಹಾಯ ನೀಡುವುದರೊಂದಿಗೆ ಈ ಬಾರಿಯ ದೀಪಾವಳಿ ಯನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದು ಹಲವರ ಮೆಚ್ಚುಗೆಗೆ ಪಾತ್ರವಾಯಿತು.
ಛಾಯಾಗ್ರಾಹಕ ಮನೋಜ್ ನೇತೃತ್ವದ ತಂಡ ಈ ಬಾರಿ ಪಟಾಕಿ ವ್ಯಾಪಾರದಲ್ಲಿ ತೊಡಗಿಸಿ ಕೊಂಡಿದ್ದು, ಗಳಿಕೆಯ ಒಂದಂಶವನ್ನು 9 ಬಡ ಕುಟುಂಬಗಳಿಗೆ ತಿಂಗಳ ಅಕ್ಕಿ ಮತ್ತು ದಿನಸಿಗಳಿಗೆ ನೀಡಿದರು. ಮರದಿಂದ ಬಿದ್ದು ಗಾಯಗೊಂಡಿರುವ ರವೀಂದ್ರ ಪ್ರಭು, ಪತಿಯನ್ನು ಕಳಕೊಂಡ ಮಹಿಳೆ ಅರುಣಾ, ಅನಾರೋಗ್ಯ ದಿಂದ ಬಳಲುತ್ತಿರುವ ಮೋನಪ್ಪ ನಾಯ್ಕ್ ಕಡಬ, ಕಿಡ್ನಿ ವೈಫಲ್ಯದಿಂದರುವ ದಿವ್ಯ, ವಿಕಲಚೇತನ ಉಪ್ಪಿನಂಗಡಿ ಯ ದಿಗಂತ್, ನಾರಾಯಣ, ವಿಶೇಷ ಚೇತನ ಮಕ್ಕಳಾದ ಮಿಥುನ್ ರಾಜ್, ವಿದ್ಯಾ ರಾಜ್, ಅನಾರೋಗ್ಯದಿಂದ ಬಳಲುತ್ತಿರುವ ಚಂದ್ರಶೇಖರ ಭಂಡಾರಿ, ಅಪಘಾತ ದಿಂದ ಗಾಯಗೊಂಡಿರುವ ಬೆಳ್ಳಾರೆಯ ವಿಜಯ ಕುಮಾರ್ ವರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ಧನ ಸಹಾಯ ನೀಡುವುದರ ಮೂಲಕ ದೀಪಾವಳಿಯನ್ನು ವಿಶೇಷ ರೀತಿಯಲ್ಲಿ ಆಚರಿಸಿತು. ಸಮಾರಂಭದಲ್ಲಿ ಪುತ್ತೂರಿನ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ, ಪುತ್ತೂರು ನಗರ ಎಸ್.ಐ.ಶ್ರೀಕಾಂತ್ ರಾಥೋಡ್, ಪುತ್ತೂರು ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ನಿವೃತ್ತ ಅರಣ್ಯಧಿಕಾರಿ ಬಾಲಕೃಷ್ಣ, ಪಟಾಕಿ ಅಂಗಡಿ ಮಾಲೀಕ ಮನೋಜ್ ಮತ್ತು ತಂಡ ಉಪಸ್ಥಿತರಿದ್ದರು. ಮಾಲೀಕ ಮನೋಜ್ ಪ್ರಸ್ತಾವಿಕವಾಗಿ ಮಾತನಾಡಿ, ನವೀನ್ ಕುಲಾಲ್ ಸ್ವಾಗತಿಸಿ ವಂದಿಸಿದರು.