ನೇಸರ ಡಿ 12: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅವರ ಪದಗ್ರಹಣ ಸಮಾರಂಭ ಮಂಗಳೂರಿನ ಎಸ್ ಡಿ ಎಂ ಕಾಲೇಜು ಸಭಾಂಗಣದಲ್ಲಿ ಶನಿವಾರ ನೆರವೇರಿತು.
ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ ಕನ್ನಡದ ಚಟುವಟಿಕೆಗಳಿಗೆ ನೀಡಲಾಗುವ ಅನುದಾನ ಕಡಿಮೆಯಾಗಿದ್ದರೂ ಲಭ್ಯವಿರುವ ಸೀಮಿತ ಅನುದಾನದಲ್ಲಿ ಕೆಲಸವನ್ನು ಮುಂದುವರಿಸುವ ಸವಾಲು ನಮ್ಮ ಮುಂದೆ ಇದೆ ಎಂದರು.
ಕಸಾಪ ನೂತನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಮಾತನಾಡಿ ಜಿಲ್ಲೆಯಲ್ಲಿ ಕನ್ನಡ ಸಂಬಂಧಿ ಚಟುವಟಿಕೆಗಳನ್ನು ನಡೆಸಲು ಕನ್ನಡ ಭವನ ನಿರ್ಮಾಣದ ಅವಶ್ಯಕತೆ ಇದ್ದು, ಅದನ್ನು ಆದ್ಯತೆಯ ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ನೀಡಿದ್ದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥಾಲಯ ಸ್ಥಾಪನೆ,ಶಾಲಾ-ಕಾಲೇಜುಗಳ ಕನ್ನಡ ಸಂಘಗಳ ಬಲವರ್ಧನೆ,ದತ್ತಿ ಉಪನ್ಯಾಸ ಮತ್ತಿತರ ಆಶ್ವಾಸನೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರಬೇಕು ಎಂದರು.
ಕನ್ನಡ-ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್.ಜಿ ಪದಗ್ರಹಣ ಅಧಿಕಾರಿಯಾಗಿದ್ದರು.ಪರಿಷತ್ ಧ್ವಜವನ್ನು ಡಾ.ಎಂ.ಪಿ.ಶ್ರೀನಾಥ್ ಅವರಿಗೆ ಹಸ್ತಾಂತರಿಸಿ ಪದಗ್ರಹಣ ನೆರವೇರಿಸಿದರು.
ಮಂಜುನಾಥ.ಎಸ್ ಸ್ವಾಗತಿಸಿ ಗಣೇಶ ಹೆಬ್ಬಾರ್ ವಂದಿಸಿದರು ಮಂಜುಳಾ ಶೆಟ್ಟಿನಿರೂಪಿಸಿದರು.