
ಬೆಳ್ತಂಗಡಿ: ಬಿಜೆಪಿಯ ಆಡಳಿತ ನಡೆಸುವ ಎಲ್ಲಾ ಕಡೆಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದೆ. ಇನ್ನು ಹೆಚ್ಚಿನ ಯೋಜನೆಗಳನ್ನು ಜನರಿಗೆ ತಲುಪಲು ಹಾಗೂ ಅಭಿವೃದ್ಧಿಯಲ್ಲಿ ಇನ್ನಷ್ಟು ಹೊಸತನ ರೂಪ ಪಡೆಯಲು ಬಿಜೆಪಿಯು ಆಡಳಿತಕ್ಕೆ ಬರುವ ಅಗತ್ಯವಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ನ.6 ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಕಲಾಭವನದಲ್ಲಿ ನಡೆದ ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವು ಕಾಂಗ್ರೆಸ್ ಮುಖಂಡರುಗಳಿಗೆ ತಾವು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ಸ್ಪಷ್ಟವಾದ ಭ್ರಷ್ಟತೆ ಇಲ್ಲ. ಕೆಲವರಂತೂ ತಾವೇ ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವುದು ಹಾಸ್ಯಸ್ಪದವಾಗಿದೆ. ಅಪಪ್ರಚಾರಗಳು ಚುನಾವಣೆ ಹತ್ತಿರ ಬರುತ್ತಿದ್ದಂತೆ ಆರಂಭಗೊಂಡಿದೆ, ಕಾರ್ಯಕರ್ತರು ಜಾತಿ ರಾಜಕೀಯಗಳ ಕಡೆ ಗಮನಹರಿಸದೆ, ಎಲ್ಲರೂ ಒಟ್ಟಾಗಿ ಮುಂದುವರಿಯಬೇಕು ಎಂದು ತಿಳಿಸಿದರು.
ಶಾಸಕ ಹರೀಶ್ ಪೂಂಜ ರವರು ಚುನಾವಣೆಗೆ ಮೊದಲು ಕೊಟ್ಟ ಭರವಸೆಗಳನ್ನು ನೆರವೇರಿಸಿದ್ದಾರೆ. ಬೆಳ್ತಂಗಡಿಯ ನವ ನಿರ್ಮಾಣದ ಅವರ ಕನಸು ಹಲವು ಯೋಜನೆಗಳ ಮೂಲಕ ಸಹಕಾರಗೊಳ್ಳುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತವು ಜನಪರವಾಗಿ ಕೆಲಸ ನಿರ್ವಹಿಸುತ್ತಿದೆ. ಬಿಜೆಪಿ ಪಕ್ಷವು ಮುಂದಿನ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ ಕಳೆದ 4 ವರ್ಷಗಳ ಆಡಳಿತದಿಂದ ಉತ್ತೇಜನ ಹೊಂದಿರುವ ಇತರ ಪಕ್ಷಗಳ ಅನೇಕ ಮುಖಂಡರು ಪದಾಧಿಕಾರಿಗಳು ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಬೆಳ್ತಂಗಡಿಯ ಅಭಿವೃದ್ಧಿಗೆ ಪ್ರೇರಣೆ ಸಚಿವ ಸುನಿಲ್ ಕುಮಾರ್. ಇದುವರೆಗೆ ಸುಮಾರು 3,000 ಕೋಟಿ ರೂ. ಅನುದಾನದಿಂದ ಅನೇಕ ಯೋಜನೆಗಳನ್ನು ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗಿದೆ. ವಿವಿಧ ಇಲಾಖೆಗಳ ಮೂಲಕ ಹೆಚ್ಚಿನ ಪ್ರಯೋಜನವನ್ನು ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಉಸ್ತುವಾರಿ ಹರಿಕೃಷ್ಣ ಬಂಟ್ವಾಳ ಮಾತನಾಡಿ ಮೋದಿ ಸರಕಾರ ನೀತಿ ವಾದದ ರಾಜಕೀಯದ ಮೂಲಕ ದೇಶವನ್ನು ಮುನ್ನಡೆಸುತ್ತಿದೆ. ಯಾವುದೇ ತಾರತಮ್ಯವಿಲ್ಲದೆ ಜನಪರ ಸರಕಾರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಬೆಳ್ತಂಗಡಿ ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಪ್ರಭಾಕರ್ ಬಂಗೇರ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸುಮಜಲು, ಅಲ್ಪ ಸಂಖ್ಯಾತರ ಮೋರ್ಚಾ ಜಿಲ್ಲಾಧ್ಯಕ್ಷ ಜೋಯಲ್ ಮೆಂಡೋನ್ಸಾ, ನ ಪಂ ಅಧ್ಯಕ್ಷ ರಜನಿ ಕೂಡ, ಉಪಾಧ್ಯಕ್ಷ ಜಯಾನಂದ ಗೌಡ, ಧನಲಕ್ಷ್ಮಿ ಉಪಸ್ಥಿತರಿದ್ದರು
ಧರ್ಮಸ್ಥಳ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಮಂಡಲ ಉಪಾಧ್ಯಕ್ಷ ಸೀತಾರಾಮ್ ಬೆಳಾಲು ವಂದಿಸಿದರು.
ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ, ಯುವ ಕಾಂಗ್ರೆಸ್ ಮುಖಂಡರಾಗಿದ್ದ ಚಂದನ್ ಪ್ರಸಾದ್ ಕಾಮತ್, ಲಾಯಿಲ ಗ್ರಾ.ಪಂ ಮಾಜಿ ಅಧ್ಯಕ್ಷ, ತಾ.ಪಂ ಮಾಜಿ ಸದಸ್ಯ ಸುಧಾಕರ ಬಿ.ಎಲ್, ಮುಂಡಾಜೆ ಗ್ರಾ.ಪಂ ಮಾಜಿ ಸದಸ್ಯೆ ಅಶ್ವಿನಿ ಎ. ಹೆಬ್ಬಾರ್, ವೇಣೂರಿನ ಸತೀಶ್ ಮಡಿವಾಳ, ಧರ್ಮಸ್ಥಳ ಗ್ರಾ.ಪಂ ಸದಸ್ಯೆ ಗಾಯತ್ರಿ, ಕುಕ್ಕಳದ ರಾಜೇಶ್ವರಿ, ಮಾಲಾಡಿ ಗ್ರಾ.ಪಂ ಸದಸ್ಯ ಪುನೀತ್ ಕುಮಾರ್, ಸಹಕಾರಿ ಧುರೀಣ ಪುಷ್ಪರಾಜ ಜೈನ್, ಕನ್ಯಾಡಿ ಶಾಲಾಭಿವೃದ್ಧಿ ಅಧ್ಯಕ್ಷ ನಂದ ಭಟ್, ಸತೀಶ್ ರಾವ್ ನಿಡ್ಲೆ, ಮಹೇಶ್ ಜೈನ್ ಧರ್ಮಸ್ಥಳ, ಧರ್ಮಸ್ಥಳ ಗ್ರಾ.ಪಂ ಮಾಜಿ ಸದಸ್ಯ ಆಂಟೊನಿ ಕಲ್ಲೇರಿ, ಬಿ ಎಸ್ ಎಫ್ ಮಾಜಿ ಯೋಧ ಸೆಬಾಸ್ಟಿಯನ್, ಆರಂಬೋಡಿ ಗ್ರಾ.ಪಂ ಮಾಜಿ ಸದಸ್ಯ ಆನಂದ ಶೆಟ್ಟಿ, ಕಾಶಿಬೆಟ್ಟು, ಶನೈಶ್ಚರ ದೇವಸ್ಥಾನದ ಮೊಕ್ತೇಸರ ಜನಾರ್ದನ ಆಚಾರ್ಯ, ಕುಕ್ಕಳದ ವಿಠಲ, ಮೊಗ್ರು ಗ್ರಾಮದ ಕೇಶವ, ಕಲ್ಮಂಜ ಗುತ್ತು ಮನೆಯ ಸುಂದರಿ, ಮೊದಲಾದ ನಾಯಕರು ಹಾಗೂ ಹಲವಾರು ಮಂದಿ ಅಭಿಮಾನಿಗಳು ಬಿಜೆಪಿಗೆ ಸೇರ್ಪಡೆಗೊಂಡರು.





