ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಗಣಿತ ವಿಭಾಗದ ವತಿಯಿಂದ ವಿಶ್ವ ಗಣಿತ ದಿನವನ್ನು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಶ್ರೀನಿವಾಸ ರಾಮನುಜನರ 135ನೇ ಜನ್ಮದಿನದಂದು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಶಾಂತಿಪ್ರಕಾಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಶಿಸ್ತು, ಏಕಾಗ್ರತೆ ಮತ್ತು ಜವಾಬ್ದಾರಿ ನಿರ್ವಹಣೆಯಂತಹ ಜೀವನ ಮೌಲ್ಯಗಳಿಂದ ಯಶಸ್ಸು ಕಾಣಬಹುದಾಗಿದೆ. ನಮ್ಮ ಆಸಕ್ತಿಯ ವಿಷಯಗಳನ್ನು ಕಂಡುಕೊಂಡು ಹೆಚ್ಚಿನ ಅಧ್ಯಯನ ಮಾಡಿದಾಗ ಜಯಗಳಿಸಬಹುದು. ಶ್ರೀನಿವಾಸ್ ರಾಮನುಜನರು ಇಂದಿನ ಯುವ ಗಣಿತ ತಜ್ಞರಿಗೆ ಸ್ಪೂರ್ತಿಯಾಗಿದ್ದಾರೆ” ಎಂದು ಹೇಳಿದರು.
ಜರ್ಮನ್ ರೈಲ್ವೆ ಸಂಸ್ಥೆಯ ಸಂಶೋಧಕರಾದ ಅನಂತ ಕೃಷ್ಣ ಇರ್ವತ್ತ್ರಾಯರವರು ರೈಲು ತಯಾರಿಕೆಯಲ್ಲಿ ಗಣಿತದ ಮಹತ್ವ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಧ್ಯಾಹ್ನದ ನಂತರ ಜರ್ಮನ್ ಅಧಿಕಾರಿಗಳಿಂದ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾಲ್ ಮೂಲಕ ವರ್ಚಯಲ್ ಸಂವಹನ ನಡೆಸಲಾಯಿತು. ರೈಲ್ವೆ ಸುರಕ್ಷತಾ ತಜ್ಞರಾದ ಕ್ಲಾಸ್ ತೈಸ್ ವಂಡರ್ ಬೆ ರವರು ಲೇಸರ್ ಗಳಿಂದ ಸೊಳ್ಳೆಗಳನ್ನು ಕೊಲ್ಲುವ ವಿಧಾನಗಳನ್ನು ತಿಳಿಸಿಕೊಟ್ಟರು. ಭೌತಶಾಸ್ತ್ರಜ್ಞರಾದ ಡಾ.ಕ್ರಿಸ್ಟಿಯಾನ್ ಹೌಸ್ ವಾಲ್ಡ್ ಸೆನ್ಸಾರ್ ಗಳ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಆಶುಭಾಷಣ ಮತ್ತು ಬಿತ್ತಿಪತ್ರ ಪ್ರದರ್ಶನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಣಿತ ವಿಭಾಗದ ಮುಖ್ಯಸ್ಥರಾದ ಗಣೇಶ್ ನಾಯಕ್ ಮಾತನಾಡಿ, ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕರಾದ ಪೂಜಿತಾ ವರ್ಮಾ, ಅಕ್ಷತಾ ಬಿ, ಸ್ನಾತಕೋತ್ತರ ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಾಘವೇಂದ್ರ, ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಸ್. ಎನ್. ಕಾಕತ್ಕರ್ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಎಮೀಲಿಯಾ ನಿರೂಪಿಸಿದರು.