ಅಂಗವಿಕಲತೆ ಒಂದು ಶಾಪವಲ್ಲ ಅದು ಒಂದು ನೈಸರ್ಗಿಕ ಬದಲಾವಣೆ ಅಷ್ಟೇ

ಶೇರ್ ಮಾಡಿ

ಈ ಪ್ರಪಂಚದಲ್ಲಿ ಭಗವಂತ ಸೃಷ್ಟಿಸಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಮತ್ತು ಸ್ವತಂತ್ರವಾಗಿ ಜೀವಿಸುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಭಗವಂತ ಸೃಷ್ಟಿಸುವಾಗ ಎಲ್ಲರನ್ನೂ ಒಂದೇ ರೀತಿ ಸೃಷ್ಟಿಸುವುದಿಲ್ಲ. ಕೆಲವರಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿರುತ್ತಾನೆ. ಆದರೆ ಅಂತವರಿಗೆ ಇತರರಲ್ಲಿ ಇಲ್ಲದ ವಿಶೇಷವಾದಂತ ಶಕ್ತಿಯನ್ನು ಕರುಣಿಸುತ್ತಾನೆ. ಇಂಥವರನ್ನು ವಿಶೇಷ ಚೇತನರು ಅಥವಾ ದಿವ್ಯಾಂಗ ಚೇತನರೆಂದು ಕರೆಯುವಂತದ್ದು.

ಹೀಗಿರುವಾಗ ಇದು ಹೇಗೆ ಶಾಪವಾಗುತ್ತದೆ ಹೇಳಿ? ಈ ಸಮಾಜವೇ ಹೀಗೆ ಅಂಥವರನ್ನು ಕಂಡರೆ ಸಾಕು ಕೈಲಾಗದವರು, ಶಾಪಗ್ರಸ್ತರೆಂದು, ಆಡಿಕೊಳ್ಳುವವರೇ ಹೆಚ್ಚು. ಆದರೆ ನಿಜ ಏನೆಂದರೆ ಈ ಅಂಗವಿಕಲತೆ ಎಂಬುದು ಒಂದು ಶಾಪವಲ್ಲ, ಬದಲಾಗಿ ಅದೊಂದು ವರ. ಇಂತಹ ಮಕ್ಕಳು ಅದೆಲ್ಲಿಯವರೆಗೆ ಇಂತಹ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದರೆ ಕೆಲವೊಮ್ಮೆ ಅವರ ಪೋಷಕರೆ ಅವರ ಪಾಲಿಗೆ ಶತ್ರುಗಳಾಗಿ ಬಿಡುತ್ತಾರೆ. ನೀನು ಒಂದು ಅನಿಷ್ಟ, ಶಾಪಗ್ರಸ್ತ, ಭೂಮಿಗೆ ಬಾರ ಹೀಗೆಲ್ಲಾ ನಿಂದಿಸಿ ಬಿಡುತ್ತಾರೆ.

ಕೆಲವೊಂದು ಉದಾಹರಣೆಗಳನ್ನು ನೋಡುತ್ತಾ ಹೋಗುವುದಾದರೆ, ಒಬ್ಬ ಹುಡುಗ ಒಂದು ವಿಕಲಚೇತನ ಹುಡುಗಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮುಂಬೈಗೆ ಕರೆದೊಯ್ದು ವೇಶ್ಯಾವಾಟಿಕೆ ದಂಧೆಗೆ ಮಾರಿಬಿಡುತ್ತಾನೆ. ತದನಂತರ, ಆ ದಂಧೆ ನಡೆಯುತ್ತಿದ್ದ ಸ್ಥಳಕ್ಕೆ ಧಾಳಿ ಮಾಡಿ , ಆ ಹುಡುಗಿಯನ್ನು ರಕ್ಷಣೆ ಮಾಡುತ್ತಾರೆ, ತದನಂತರ ಅವಳನ್ನು ಪೋಷಕರಿಗೆ ಒಪ್ಪಿಸುತ್ತಾರೆ, ಆದರೆ ಅವಳು ನಾನು ಯಾವುದೇ ಕಾರಣಕ್ಕೂ ಮನೆಯವರ ಬಳಿ ಹೋಗುವುದಿಲ್ಲ, ಅವರು ದಿನ ನನಗೆ, ನೀನು ನಮ್ಮ ಮನೆಗೆ ಶಾಪ, ನೀನು ಹುಟ್ಟಲೇ ಬಾರದಿತ್ತು ಎಂದೆಲ್ಲಾ ನಿಂದಿಸುತ್ತಾರೆ. ನಾನು ಬೇಕಾದರೆ ಇಲ್ಲೇ ಇರುತ್ತೇನೆ ಎಂದು ಹಟ ಮಾಡುತ್ತಾಳೆ. ಅಂದರೆ ಅವಳ ಮನಸ್ಸಿನ ಮೇಲೆ ಪೋಷಕರ ಮಾತುಗಳು ಎಷ್ಟರಮಟ್ಟಿಗೆ ಪ್ರಭಾವ ಬೀರಿರಲಿಕ್ಕಿಲ್ಲ ಹೇಳಿ ?. ಈ ತರದ ಮಾತುಗಳೆಲ್ಲ ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿ ಅವರು ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆಯಿದೆ.

ಇನ್ನೊಂದು ಮನೆಯಲ್ಲಿ ಒಂದು ವಿಶೇಷ ಚೇತನ ಮಗುವಿರುತ್ತದೆ. ಅದರ ಪರಿಸ್ಥಿತಿ ಹೇಗಿರುತ್ತೆ ಎಂದರೆ ಆ ಮಗು ಬುದ್ಧಿಮಾಂದ್ಯ ಮಗುವಾಗಿರುತ್ತದೆ. ಪೋಷಕರು ಹೇಳಿದ ಯಾವುದೇ ಮಾತುಗಳನ್ನು ಗ್ರಹಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆ ಮಗುವಿಗೆ ಒಬ್ಬ ಅಣ್ಣ ಕೂಡ ಇರುತ್ತಾನೆ. ಅಷ್ಟೇ ಅಲ್ಲದೆ ಅವನಿಗೆ ಮದುವೆ ಕೂಡ ಆಗಿರುತ್ತದೆ. ಅವನ ತಲೆಯಲ್ಲಿ ಒಂದು ಯೋಚನೆ ಬರುತ್ತದೆ. ಇವಳು ನಮ್ಮ ಮನೆಯಲ್ಲಿ ಇದ್ದರೆ ಎಲ್ಲಿ ನನ್ನ ಹೆಂಡತಿಗೆ ತೊಂದರೆ ಮಾಡಿಬಿಡುತ್ತಾಳೋ? ಮುಂದೊಂದು ದಿನ ನನ್ನ ಮಗುವಿಗೆ ಎಲ್ಲಿ ತೊಂದರೆ ಆಗುತ್ತದೋ ಎಂದೆಲ್ಲ ಯೋಚಿಸಿ ತನ್ನ ಒಡಹುಟ್ಟಿದ ತಂಗಿ ಎಂದು ಸಹ ನೋಡದೆ ಒಂದು ಕೋಣೆಯಲ್ಲಿ ಬಂಧಿಸಿಡುತ್ತಾನೆ. ಆದರೆ ಆ ಮಗುವಿನ ತಾಯಿಗೆ ಆ ಮಗುವಿನ ಪರಿಸ್ಥಿತಿ ಕಂಡು ತುಂಬಾ ದುಃಖವಾಗುತ್ತದೆ. ಮಗನಿಗಾದರೂ ಬುದ್ಧಿವಾದ ಹೇಳೋಣವೆಂದರೆ ಆ ಮಗ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೂ ಆ ಮಗು ಆ ಕತ್ತಲೆ ಕೋಣೆಯಲ್ಲಿ ಬಂಧಿಯಾಗಿ ಬಿಡುತ್ತದೆ. ಆದರೆ ಒಂದು ದಿನ ಈ ವಿಷಯ ಹೇಗೋ ಗೊತ್ತಾಗಿ ಅಧಿಕಾರಿಗಳು ಭೇಟಿ ನೀಡುತ್ತಾರೆ. ಆ ಮಗುವಿನ ಪರಿಸ್ಥಿತಿ ಕಂಡು ಸ್ವತಃ ಅಧಿಕಾರಿಗಳೇ ಬೆಚ್ಚಿ ಬೀಳುತ್ತಾರೆ. ತದನಂತರ ಆ ಮಗುವನ್ನು ರಕ್ಷಿಸಿ ತಮ್ಮ ಆಶ್ರಮಕ್ಕೆ ಕೊಂಡೊಯಲು ನಿರ್ಧರಿಸುತ್ತಾರೆ. ಅಷ್ಟೊತ್ತಿಗೆ ಆ ತಾಯಿ ಕೂಡ ಮಾನಸಿಕ ಸ್ಥಿಮಿತ ಕಳೆದುಕೊಂಡಿರುತ್ತಾಳೆ. ಅಂತ ಪರಿಸ್ಥಿತಿಯಲ್ಲಿ ಆ ತಾಯಿ ಅಧಿಕಾರಿಗಳಿಗೆ ಒಂದು ಮಾತನ್ನು ಹೇಳುತ್ತಾಳೆ. ಅದೇನೆಂದರೆ, ಅಬ್ಬಾ ನನ್ನ ಮಗುವಿಗೆ ಕೊನೆಗೂ ಮುಕ್ತಿ ದೊರೆಯಿತು, ಅವಳಿಗೆ ರಕ್ಷಣೆ ನೀಡಿದ್ದೀರಿ, ಇನ್ನು ನಾನು ನೆಮ್ಮದಿಯಾಗಿ ಪ್ರಾಣ ಬಿಡಬಹುದೆಂದು ಹೇಳಿ ಕಣ್ಮುಚ್ಚುತ್ತಾಳೆ. ಎಂಥ ಕರುಣಾಜನಕ ಕಥೆ ನೋಡಿ ತನ್ನ ಸ್ವಾರ್ಥಕ್ಕಾಗಿ ತನ್ನ ಒಡಹುಟ್ಟಿದ ತಂಗಿ ಎಂದು ಸಹ ನೋಡದೆ ಎಂಥಾ ಪರಿಸ್ಥಿತಿ ನಿರ್ಮಾಣ ಮಾಡಿದ್ದಾನೆ. ಇಂಥ ಮನಸ್ಥಿತಿಯುಳ್ಳವರು ಪ್ರತಿಯೊಬ್ಬರು ಬದಲಾಗಬೇಕು.

ಏಕೆಂದರೆ ಇವತ್ತು ವಿಶೇಷ ಚೇತನರು ಕೂಡ ಉಳಿದವರಿಗೆ ಯಾವುದೇ ಕ್ಷೇತ್ರದಲ್ಲೂ ಕೂಡ ಕಡಿಮೆ ಇಲ್ಲ. ಈಗ ಉದಾಹರಣೆಗೆ ಕ್ರೀಡಾಕ್ಷೇತ್ರದಲ್ಲಿ ಇರಬಹುದು ಕಾಲುಗಳಿಲ್ಲದಿದ್ದರೂ ಕೂಡ ಕೃತಕ ಕಾಲುಗಳ ಮೂಲಕ ಓಡಿ ಗುರಿ ಸಾಧಿಸಿದವರು ಇದ್ದಾರೆ. ಉಳಿದವರಿಗಿಂತ ನಾವು ಏನು ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ತಮ್ಮ ನ್ಯೂನ್ಯತೆಯನ್ನು ಮೆಟ್ಟಿನಿಂತು ಉನ್ನತ ಸ್ಥಾನಗಳಲ್ಲಿ ಕೆಲಸಗಿಟ್ಟಿಸಿಕೊಂಡವರಿದ್ದಾರೆ. ಅಷ್ಟೇ ಅಲ್ಲದೆ ನಮ್ಮಲ್ಲಿ ಆತ್ಮಸ್ಥೈರ್ಯ ಹೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ವಿಪರ್ಯಾಸ ಏನೆಂದರೆ ಇಂಥವರಿಗೆ ಎಷ್ಟೇ ಸಾಧನೆ ಮಾಡಿದರು ಸ್ವತಃ ಸರಕಾರಗಳೇ ಇಂಥವರ ಬಗ್ಗೆ ಗಮನ ಹರಿಸುತ್ತಿಲ್ಲ. ಕೇವಲ ಸೌಲಭ್ಯಗಳನ್ನು ಹಂಚಿದರೆ ಸಾಲದು ಆ ಸೌಲಭ್ಯಗಳು ಮನೆ ಮನೆ ತಲುಪಿದೆಯೋ ಇಲ್ಲವೋ ಎಂಬುದನ್ನು ಸರಿಯಾಗಿ ಗಮನಿಸಬೇಕು. ಒಂದು ವೇಳೆ ಇವತ್ತು ಸರಕಾರ ನೀಡಿದ ಪ್ರತಿಯೊಂದು ಸೌಲಭ್ಯವು ಕೂಡ ಪ್ರತಿಯೊಬ್ಬ ಅಂಗವಿಕಲನ ಮನೆಗೆ ತಲುಪಿದ್ದರೆ ಒಂದು ಹೊತ್ತಿನ ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಖಂಡಿತ ಬರುತ್ತಿರಲಿಲ್ಲ. ಇವತ್ತು ಸರಕಾರ ನೀಡುವ ಪ್ರತಿಯೊಂದು ಸೌಲಭ್ಯಗಳು ಜನರ ಮನೆಗೆ ತಲುಪುತ್ತಿಲ್ಲ ಬದಲಾಗಿ ಕೆಲವು ಭ್ರಷ್ಟಾಧಿಕಾರಿಗಳ ಮನೆ ಸೇರುತ್ತಿದೆ. ಯಾಕೆ ಹೀಗೆ? ಇಂದು ನಮ್ಮನ್ನ ನಾವೇ ಪ್ರಶ್ನಿಸಿಕೊಂಡಾಗ ಸರಕಾರ ಇದರ ಬಗ್ಗೆ ಸರಿಯಾಗಿ ಗಮನ ಹರಿಸಿದ್ದರೆ ಇಂದು ಇಂಥ ಪರಿಸ್ಥಿತಿ ಖಂಡಿತ ಬರುತ್ತಿರಲಿಲ್ಲ. ವಿದೇಶದಲ್ಲಿ ಪ್ರತಿಯೊಬ್ಬ ವಿಶೇಷ ಚೇತನ ಮಗುವೂ ಕೂಡ ಸ್ವತಂತ್ರ ವ್ಯಕ್ತಿ. ಅವರು ಕೂಡ ಸಾಮಾನ್ಯರೇ. ಆದರೆ ಇಲ್ಲಿ ಯಾಕೆ ಹಾಗಿಲ್ಲ? ಒಂದು ವಿಶೇಷ ಚೇತನ ಮಗುವಿನ ಜೀವನ ಅಷ್ಟು ಸುಲಭವಿಲ್ಲ. ಈ ರೀತಿ ಜನಿಸಿದ ಮಗು ಹುಟ್ಟಿನಿಂದಲೇ ಸವಾಲುಗಳನ್ನು ಸ್ವೀಕರಿಸಲು ಸಿದ್ಧನಿರಬೇಕು. ಯಾಕೆಂದರೆ ಬೆಳೆಯುತ್ತಾ ಬೆಳೆಯುತ್ತಾ ಸಮಾಜದ ತುಚ್ಛ ಮಾತುಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಆ ಮಗು ಎಷ್ಟು ಧೈರ್ಯವಂತರಾಗಿದ್ದರೂ ಸಾಲದು. ಆ ಕಷ್ಟ ಅನುಭವಿಸಿದವನಿಗೆ ಮಾತ್ರ ಗೊತ್ತಿರಲು ಸಾಧ್ಯ. ಯಾರಾದರೂ ಈ ಪ್ರಪಂಚದಲ್ಲಿ ಅತ್ಯಂತ ಕಷ್ಟಕರವಾದ ಕೆಲಸ ಯಾವುದೆಂದು ಕೇಳಿದರೆ ಅದು ಇನ್ನೊಬ್ಬನನ್ನು ಅವಲಂಬಿಸಿ ಬದುಕುವುದು. ಪ್ರತಿಯೊಂದಕ್ಕೂ ಇನ್ನೊಬ್ಬನನ್ನು ಅವಲಂಬಿಸಿ ಬದುಕಬೇಕು. ಎಲ್ಲೂ ಸ್ವಾತಂತ್ರ್ಯವಾಗಿ ಓಡಾಡಲಾಗದ ಪರಿಸ್ಥಿತಿ. ಕಾರ್ಯಕ್ರಮಗಳಿದ್ದರಂತೂ ಕೇಳುವುದೇ ಬೇಡ, ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೆ ಹೋದಾಗಲಂತೂ ಎಲ್ಲರೂ ಸಿಂಗಾರ ಗೊಂಡು ಬಣ್ಣ ಬಣ್ಣದ ಬಟ್ಟೆ ತೊಟ್ಟು ಓಡಾಡುತ್ತಿದ್ದರೆ ನಾವು ಮಾತ್ರ ಮನಸ್ಸೊಳಗೆ ಖುಷಿಪಡಬೇಕು. ಅಷ್ಟೇ ಅದಲ್ಲದೆ ಎಲ್ಲಾದರೂ ಹೋದರೆ ಸಾಕು, ನಮ್ಮನ್ನು ನೋಡಿ ಕರುಣೆ ತೋರುವ ಗುಂಪು ಒಂದು ಅದಾಗಲೇ ಸೃಷ್ಟಿಯಾಗಿ ಬಿಡುತ್ತದೆ. ಅವರು ತೋರುವುದು ಅನುಕಂಪವಾಗಿರಬಹುದು ಆದರೆ ನಮ್ಮ ಪಾಲಿಗೆ ಅದೇ ಚಿತ್ರಹಿಂಸೆ ತರುವ ಸನ್ನಿವೇಶಗಳು. ಹೀಗೆ ಇದರ ಬಗ್ಗೆ ಎಷ್ಟು ಹೇಳಿದರು ಇದು ಮುಗಿಯದ ಅಧ್ಯಾಯ ಆದರೆ ಇದನ್ನೆಲ್ಲ ಎದುರಿಸಿ ಬದುಕೆಂಬ ರಥ ಚಲಾಯಿಸಿ ಅಂದುಕೊಂಡಿದ್ದನ್ನು ಸಾಧಿಸಿ ಗೆಲುವಿನ ನಗೆ ಬೀರುವುದಿದೆಯಲ್ಲ ಅದುವೆ ದೊಡ್ಡ ಸಾಧನೆ.

ನಿಮಗೆಲ್ಲ ನೆನಪಿರಬಹುದು ಮೊನ್ನೆ ತಾನೆ ಅಂದರೆ ಡಿಸೆಂಬರ್ ಮೂರರಂದು ವಿಶ್ವ ವಿಕಲಚೇತನರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಆದರೆ ಉಳಿದ ದಿನಗಳ ದಿನಾಚರಣೆಗಳನ್ನು ವಾರಗಟ್ಟಲೆ ಪ್ರಸಾರ ಮಾಡುವ ನಮ್ಮ ಮಾಧ್ಯಮಗಳಿಗೆ ಈ ದಿನ ಯಾಕೋ ನೆನಪಾಗಲೇ ಇಲ್ಲ. ಇದೊಂದು ವಿಪರ್ಯಾಸ ಅಲ್ಲವೇ? ಭಾಷಣಗಳನ್ನು ಯಾರು ಹೇಗೆ ಬೇಕಾದರೂ ಮಾಡಬಹುದು, ಆದರೆ ಪ್ರಸ್ತುತ ದಿನಗಳಲ್ಲಿ ಭಾಷಣ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿರುತ್ತದೆ ಹೊರತು ಕಾರ್ಯರೂಪಕ್ಕೆ ಬರುವುದಿಲ್ಲ. ಇದೊಂದು ದುರಂತವೇ ಸರಿ.

ಕೊನೆಯದಾಗಿ ನಾನು ಹೇಳುವುದೆನೆಂದರೆ ಪ್ರತಿಯೊಬ್ಬ ದಿವ್ಯಾಂಗ ಚೇತನ ಮಗು ಕೂಡ ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕು. ಸ್ವತಂತ್ರವಾಗಿ ಜೀವಿಸುವಂತಾಗಬೇಕು. ಇದನ್ನೆಲ್ಲ ಬರೆದಿರುವುದು ಯಾರೋ ಹೇಳಿದ್ದನ್ನು ಕೇಳಿ ಆಗಲಿ ನೋಡಿ ಆಗಲಿ ಅಲ್ಲ. ಸ್ವತಃ ಅನುಭವದಿಂದ ಯಾಕೆಂದರೆ ನಾನು ಕೂಡ ಒಬ್ಬಳು ವಿಶೇಷ ಚೇತನ ಹುಡುಗಿ.

ಲೇಖನ:
ಪ್ರಾಪ್ತಿ ಗೌಡ
ಪ್ರಥಮ ಕಲಾ ಪದವಿ
ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ
.

Leave a Reply

error: Content is protected !!