ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ 1ನೇ ವಾರ್ಡ್ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ, ಅಭಿವೃದ್ಧಿಗಾಗಿ ಜನಪ್ರತಿನಿಧಿಗಳ ಮೂಲಕ ಸಂಬಂಧಪಟ್ಟ ಶಾಸಕರಿಗೆ ಪದೇ ಪದೆ ಮನವಿ ನೀಡಿದರು ಯಾವುದೇ ಕನಿಷ್ಟ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿ ಮಾಡದೇ ಅಸಡ್ಡೆ ವಹಿಸುತ್ತಿರುವ ಕಾರಣ ಜನಪ್ರತಿನಿಧಿಗಳ ವಿರುದ್ಧ ಮತದಾರರು ಚುನಾವಣಾ ಬಹಿಷ್ಕಾರವನ್ನು ಘೋಷಿಸುವ ಬ್ಯಾನರ್ ಗಳನ್ನು ಪಾಲಾಲೆ, ಕಾಪಿನಬಾಗಿಲು, ಬೇರಿಕೆ ಎಂಬಲ್ಲಿ ಆಳವಡಿಸುವ ಮೂಲಕ ಆಕ್ರೋಶದ ಸೂಚನೆಯನ್ನು ನೀಡಿದ್ದಾರೆ.
ಕೌಕ್ರಾಡಿ ಗ್ರಾಮದ 1ನೇ ವಾರ್ಡ್ ಬೆಳ್ತಂಗಡಿ ಹಾಗೂ ಕಡಬದ ಗಡಿ ಭಾಗವಾಗಿದೆ. ಈ ವಾರ್ಡ್‍ಗೆ ಸಂಬಂಧಪಟ್ಟ ಪಾಲಾಲೆ, ಪಿಲತ್ತಿಂಜ, ಕನ್ನಹಿತ್ತಿಲು, ಕಾಂಚಿನಡ್ಕ ಕಾಲನಿ, ಒಡ್ರಳಿಕೆ, ಮಂಡೆಗುಂಡಿ, ಬೇರಿಕೆ, ನೇಲ್ಯಡ್ಕ, ಗುಂಡಿ, ಆಂತ್ರಳಿಕೆ, ಹಾರಬೈಲು, ಬಾರಗುಡ್ಡೆ ಮುಂತಾದ ಪರಿಸರಗಳಲ್ಲಿ ಮೂಲಕ ಸೌಕರ್ಯಗಳಾದ ಮೋರಿಯ ವ್ಯವಸ್ಥೆ, ಬೀದಿ ದೀಪಗಳು, ರಸ್ತೆಗಳು, ಚರಂಡಿ ವ್ಯವಸ್ಥೆ ಅಲ್ಲದೇ ಆನೆ ದಾಳಿಗಳು ಆಗಿಂದಾಗ್ಗೆ ನಡೆಸಿ ಕೃಷಿ ಹಾನಿಯಾಗುತ್ತಿದ್ದರು ಸೂಕ್ತ ಸ್ಪಂದನೆ ಸಿಗುತ್ತಿಲ್ಲ.
ರಸ್ತೆಗಳು ತೀರಾ ಹದಗೆಟ್ಟಿದ್ದು ಹಲವು ಬಾರಿ ವಾರ್ಡ್ ಸದಸ್ಯರು, ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹಾಗೂ ಶಾಸಕರಿಗೆ ಮನವಿ ನೀಡಿದರೂ ಯಾವುದೇ ಸ್ಪಂದನೆ ದೊರಕದ ಹಿನ್ನಲೆಯಲ್ಲಿ ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿ ಜ.7ರಂದು ಮತದಾನ ಬಹಿಷ್ಕಾರದ ಬ್ಯಾನರನ್ನು ಹಾಕಲಾಗಿದೆ.
ಈ ಭಾಗದಲ್ಲಿ ಸುಮಾರು 100ಕ್ಕಿಂತ ಅಧಿಕ ಮನೆಗಳಿದ್ದು, ಇನ್ನೂರಕ್ಕಿಂತಲೂ ಅಧಿಕ ಮತದಾರರಿದ್ದಾರೆ.