ನೇಸರ ಡಿ.20: ಕಪಿಲ ಕೇಸರಿ ಯುವಕ ಮಂಡಲ ಕುಂಟಾಲಪಳಿಕೆ ಇದರ ವತಿಯಿಂದ ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ನಮ್ಮ ದೇಶದ ಹೆಮ್ಮೆಯ ಹಾಗೂ ಸೇನೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಹಾಗೂ ಅವರೊಂದಿಗೆ ಮಡಿದ ಸೇನಾ ಸಿಬ್ಬಂದಿಗಳಿಗೆ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಮೋಹನ್ ಶೆಟ್ಟಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಬಾಬು ರಾಣೆಯರ್ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮೊದಲಿಗೆ ಹುತಾತ್ಮರಾದ ಸೈನಿಕರಿಗೆ ಪುಷ್ಪ ಸಮರ್ಪಣೆಯನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸೈನಿಕರಾದ ಮೋಹನ್ ಶೆಟ್ಟಿ ಇವರು ಜನರಲ್ ಬಿಪಿನ್ ರಾವತ್ ರವರ ಎಲ್ಲಾ ಸಾಧನೆಗಳನ್ನು ತಿಳಿಸುವುದರ ಜೊತೆಗೆ. ಸೈನಿಕರಿಗೆ ಎದುರಾಗುವ ಕಷ್ಟಗಳು ಯಾವುದೂ ಕಷ್ಟವೆನಿಸುವುದಿಲ್ಲ, ಯಾಕೆಂದರೆ ಅದು ಇಷ್ಟ ಪಟ್ಟು ಮಾಡುವ ದೇಶಸೇವೆ,ಅಲ್ಲಿ ಕೇವಲ ನಮ್ಮ ದೇಶ ಎಂಬುದು ಮಾತ್ರ ಕಾಣ ಸಿಗುತ್ತದೆ ಎಂದರು. ಮಡಿದ ಸೈನಿಕರು ಜಗತ್ತಿನಲ್ಲಿಯೇ ಅಜರಾಮರವಾಗಿ ಉಳಿಯುತ್ತಾರೆ ಎಂದರು. ಅದರ ಜೊತೆಗೆ ಸೈನ್ಯದಲ್ಲಿರುವಾಗಿನ ತಮ್ಮ ಅನುಭವವನ್ನು ಬಿಚ್ಚಿಟ್ಟರು. ಯುವಕರಲ್ಲಿ ಆತ್ಮವಿಶ್ವಾಸದ ಜೊತೆಗೆ ದೃಢ ನಿರ್ಧಾರ ಇದಲ್ಲಿ ಎಲ್ಲವೂ ಸಾಧ್ಯ ಎಂದು ಸ್ಪೂರ್ತಿದಾಯಕ ಮಾತನ್ನಾಡಿದರು.
ನಿವೃತ್ತ ಪೊಲೀಸ್ ಅಧಿಕಾರಿಯಾದ ಬಾಬು ರಾಣೆಯರ್ ರವರು ಇಂತಹ ಘಟನೆ ಮುಂದೆಂದೂ ನಡೆಯಬಾರದೆಂದು ಹೇಳಿ ಶ್ರದ್ಧಾಂಜಲಿ ಸಮರ್ಪಿಸಿದರು.
ಚೈತನ್ಯ ಮಿತ್ರ ಕಲಾವೃಂದ ಅರಸಿನಮಕ್ಕಿ ಅಧ್ಯಕ್ಷ ವೃಶಾಂಕ್ ಖಾಡಿಲ್ಕರ್ ಮಾತನಾಡಿ ಸೈನ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ದೇಶಸೇವೆಯಲ್ಲಿ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಿದ ಮೋಹನ್ ಶೆಟ್ಟಿ ಇವರಿಗೆ ಅಭಿನಂದನೆಯನ್ನು ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಅತಿಥಿಗಳೂ ಸೈನಿಕರ ಸಾವನ್ನು ಸಂಭ್ರಮಿಸುವ ಕೆಲವು ನೀಚರ ವಿರುದ್ಧ ಬೇಸರ ವ್ಯಕ್ತಪಡಿಸಿ,ಕಪಿಲ ಕೇಸರಿ ಯುವಕ ಮಂಡಲ ಮುಂದೆಯೂ ಇಂತಹದೇ ದೇಶಪ್ರೇಮದ ಕೆಲಸ ಮಾಡಲಿ ಎಂದು ಆಶಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.