ನೆಲ್ಯಾಡಿ: ಇಂಟರ್ ನ್ಯಾಷನಲ್ ಯೋಗದಲ್ಲಿ “ದಿ ಬೆಸ್ಟ್ ಅವಾರ್ಡ್” ಪ್ರಶಸ್ತಿಯನ್ನು ಪಡೆದ ನೆಲ್ಯಾಡಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 3ನೇ ತರಗತಿಯ ವಿದ್ಯಾರ್ಥಿ ಕುಮಾರಿ ಆರಾಧ್ಯ ಎ ರೈ ಯವರಿಗೆ ಜ 15ರಂದು ನೆಲ್ಯಾಡಿ ದುರ್ಗಾ ಶ್ರೀ ಕಾಂಪ್ಲೆಕ್ಸ್ ನಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನೆಲ್ಯಾಡಿ ಕೌಕ್ರಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಡಾ.ಸದಾನಂದ ಕುಂದರ್ ಮಾತನಾಡಿ ಈ ದಿನದ ಸನ್ಮಾನವು ಪ್ರೋತ್ಸಾಹ ನೀಡಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲು ಪ್ರೇರಣೆ ಯಾಗಲಿ ಎಂಬ ಉದ್ದೇಶದಿಂದ. ಪ್ರತಿ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದೆ, ಅದನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯದಲ್ಲಿ ಉಪಯೋಗಿಸಿಕೊಂಡು ಉತ್ತಮ ಗುರುವಿನ ತರಬೇತಿ ಸಿಕ್ಕಿದ್ದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು ಹಾಗೂ ಶುಭವನ್ನು ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ನೆಲ್ಯಾಡಿ ವರ್ತಕರ ಸಂಘದ ಉಪಾಧ್ಯಕ್ಷರಾದ ಗಣೇಶ್ ರಶ್ಮಿ, ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ್ ಕೆ ಶೆಟ್ಟಿ, ಗೋಳಿತೊಟ್ಟು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಪೂವಪ್ಪ ಕರ್ಕೇರ, ದುರ್ಗಾ ಶ್ರೀ ಕಾಂಪ್ಲೆಕ್ಸ್ ನ ಮಾಲಕರಾದ ಸತೀಶ್ ಭಟ್, ಕೆಪಿಸಿಸಿ ಸದಸ್ಯರಾದ ಕೃಷ್ಣಪ್ಪ ಸಂದರ್ಭೋಚಿತವಾಗಿ ಮಾತನಾಡಿ ಶುಭವನ್ನು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ ವಹಿಸಿ ಮಾತನಾಡಿದ ಅವರು ತನ್ನ ಆರನೇ ವಯಸ್ಸಿನಲ್ಲಿ ಯೋಗಸನವನ್ನು ಅಭ್ಯಾಸಿಸಿ ಕಠಿಣವಾದ ಭುಜಂಗಾಸನವನ್ನು 50 ಸೆಕೆಂಡುಗಳ ಕಾಲ ಪ್ರದರ್ಶಿಸಿ ದಾಖಲೆ ನಿರ್ಮಿಸಿದ ಈ ಪುಟ್ಟ ಪ್ರತಿಭೆಯ ಸಾಧನೆ ಅಸಾಧಾರಣ ಮತ್ತು ಅನನ್ಯವಾದುದು. ಈ ಬಾಲ ಪ್ರತಿಭೆಗೆ ಸನ್ಮಾನ ಮಾಡುವುದರ ಮೂಲಕ ಈ ಕಾರ್ಯಕ್ರಮವನ್ನು ಸಂಘಟಿಸಿದ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನೇತ್ರಬಂಧು ಗಂಗಾಧರ ಶೆಟ್ಟಿ ಹೊಸಮನೆ ಮತ್ತು ವರ್ತಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಕೆಲಸ ಶ್ಯಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಗೋಳಿತೊಟ್ಟು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಅಜೀಜ್, ಕುಮಾರಿ ಆರಾಧ್ಯ ಎ ರೈ ರವರ ತಂದೆ ಅವಿನಾಶ್ ರೈ, ತಾಯಿ ಶ್ರೀಮತಿ ಸಂಧ್ಯಾ ರೈ, ಶ್ರೀಮತಿ ಯಶೋಧ, ಸುಳ್ಯದ ನಿರಂತರ ಯೋಗ ಕಲಿಕಾ ಕೇಂದ್ರದ ಯೋಗ ಗುರು ಶರತ್ ಮರ್ಗಿಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ ಪತ್ರವನ್ನು ಪೂವಪ್ಪ ಕರ್ಕೇರ ರವರು ವಾಚಿಸಿದರು, ಸನ್ಮಾನ ಕಾರ್ಯಕ್ರಮದ ಸಂಘಟಕರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಂಗಾಧರ ಶೆಟ್ಟಿ ಹೊಸಮನೆ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ವಂದಿಸಿದರು.