ಉಜಿರೆ : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ರಾಷ್ಟೀಯ ಯುವ ದಿನಾಚರಣೆಯ ಅಂಗವಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಮುಖ್ಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಬಿ.ಸೋಮಶೇಖರ್ ಶೆಟ್ಟಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
“ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದಲ್ಲಿ ಅವರ ತತ್ವ ವಿಚಾರಗಳ ಅರಿವು ಯುವಜನತೆಗೆ ಅನಿವಾರ್ಯವಾದದ್ದು. ವಿದ್ಯಾರ್ಥಿಗಳ ಜೀವನ ಪರಿಪೂರ್ಣತೆಗೆ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳೂ ಅಗತ್ಯ. ಇಂದಿನ ಯುವಜನತೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಯಶಸ್ಸು ಪಡೆಯಬೇಕಿದೆ” ಎಂದು ಹೇಳಿದರು.
ಎಸ್.ಡಿ.ಎಂ.ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕರಾದ ಸಂಪತ್ ಕುಮಾರ್ ಕೆ ರವರು ಯುವಜನತೆ ಮತ್ತು ಜೀವನ ಮೌಲ್ಯಗಳು ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಸ್ಪಷ್ಟ ಗುರಿ ಹೊಂದುವುದು, ವೈಫಲ್ಯಗಳಿಂದ ಪಾಠ ಕಲಿಯುವುದು, ಕೃತಜ್ಞತಾ ಭಾವ ಮುಂತಾದ ಜೀವನ ಮೌಲ್ಯಗಳ ಪ್ರಾಮುಖ್ಯತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಯೋಜನಾಧಿಕಾರಿಯಾದ ಪೂಜಿತಾ ವರ್ಮಾ ವಹಿಸಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶಿವಾನಿ ನಿರ್ವಹಿಸಿದರು.