ಕಡಬ : ಶಿಕ್ಷಣದಿಂದ ದೇಶದ ಭವಿಷ್ಯ ಬದಲಾಯಿಸಲಾಗುತ್ತಿದೆ – ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಶೇರ್ ಮಾಡಿ

ಕಡಬ: ಕೇಂದ್ರ ಹಾಗೂ ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳನು ನೀಡುವುದರೊಂದಿಗೆ ಆಮೂಲಾಗ್ರ ಬದಲಾವಣೆ ತಂದು ಹೊಸ ಶಿಕ್ಷಣ ನೀತಿಯಿಂದ ದೇಶದ ಭವಿಷ್ಯವನ್ನು ಬದಲಾಯಿಸಿ ದೇಶವನ್ನು, ದೇಶದ ಗತವೈಭವವನ್ನು ಮರು ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.

ಅವರು ಬುಧವಾರ ಕಡಬ ಸರಕಾರಿ ಪ್ರೌಢ ಶಾಲೆಯಲ್ಲಿ ಸಚಿವರ ವಿಶೇಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಐದು ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕೋಸ್ಕರ ಬದುಕುಬೇಕು, ಭಗವಂತಕೊಟ್ಟ ಶಕ್ತಿಯನ್ನು ಸಮಾಜಕ್ಕೆ, ಈ ದೇಶಕ್ಕೋಸ್ಕರ ವಿನಿಯೋಗಿಸಬೇಕು, ನಮ್ಮ ಎಲ್ಲಾ ಕಾರ್ಯಗಳ ಸಮಾಜಮುಖಿಯಾಗಿರಬೇಕು ಎನ್ನುವ ಮೇಲ್ಪಂಕ್ತಿಯನ್ನು ನಮ್ಮ ಹಿರಿಯರು ದೇಶಕ್ಕೆ ಹಾಕಿಕೊಟ್ಟಿದ್ದಾರೆ. ಭಾರತದ ಋಷಿಮುನಿಗಳ ಕಾಲದಿಂದಲೂ ಮೌಲ್ಯಾಧಾರಿತ ಸಮಾಜವನ್ನು. ಸ್ವಾಲಂಭಿ ಸ್ವಾಭಿಮಾನಿ ಸಮಾಜ ಸೃಷ್ಠಿ ಮಾಡಿದ್ದರು. ನಮ್ಮ ಸ್ವಾತಂತ್ರ ಹೋರಾಟಗಾರರ ಉದ್ದೇಶ ಇದ್ದಿದ್ದು ನಾವು ಭಾರತದಲ್ಲಿ ಆಡಳಿತ ನಡೆಸಬೇಕೆನ್ನುವುದು ಅಲ್ಲ, ಭಾರತವನ್ನು ಮತ್ತೆ ಪರಮವೈಭವಕ್ಕೆ ಕೊಡೊಯ್ಯಬೇಕು ಎನ್ನುವ ಸದುದ್ದೆಶ. ಇಂತಹ ಪರಂಪರೆ ಇರುವ ದೇಶದಲ್ಲಿ ಪರಕೀಯರು ಆಳ್ವಿಕೆ ಮಾಡಿದರೂ ಮೌಲ್ಯಗಳು ಕುಸಿಯುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅಂದರೆ ಕಳೆದ ಇಪ್ಪತೈದು ವರ್ಷಗಳಿಂದ ಮೌಲ್ಯಗಳು ಕುಸಿಯುತ್ತಾ ಇವೆ. ಹಾಗಾಗಿ ನಮ್ಮ ಈಗಿನ ಕೇಂದ್ರ ಸರಕಾರ ಶಿಕ್ಷಣದ ಮೂಲಕ ಯುವಜನತೆಯನ್ನು ಈ ದೇಶಕ್ಕಾಗಿ ಬದುಕುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಉದ್ಧೇಶಿಸಿದೆ, ಅದಕ್ಕೆ ಹೊಸ ಶಿಕ್ಷಣ ನೀತಿ ತರುತ್ತಿದೆ ಎಂದು ಸಚಿವರು ಹೇಳಿದರು.

ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದು ಶಿಕ್ಷಣ ಸಚಿವರು ಹೇಳಿದರು. ಈ ಹಿಂದೆ ರಾಜ್ಯದಲ್ಲಿದ್ದ ಸರಕಾರ ಐದು ವರ್ಷದಲ್ಲಿ ಕೇವಲ 3517 ಕೊಠಡಿಗಳನ್ನು ಕಟ್ಟಿದ್ದಾರೆ. 5600 ಕೊಠಡಿಗಳನ್ನು ದುರಸ್ತಿ ಮಾಡಿದಾರೆ. ನಾವು ಕೇವಲ ಮೂರು ವರ್ಷದಲ್ಲಿ ಸುಮಾರು 22,000 ಕೊಠಡಿಗಳನ್ನು ನಿರ್ಮಿಸುತ್ತದ್ದೇವೆ. 1ಲಕ್ಷ ಕ್ಕೂ ಮಿಕ್ಕಿ ಕೊಠಡಿಗಳನ್ನು ದುರಸ್ತಿ ಮಾಡಿದ್ದೇವೆ. 34,000 ಅತಿಥಿ ಶಿಕ್ಷಕರನ್ನು ಶಾಲಾ ಪ್ರಾರಂಭದಲ್ಲೇ ತಗೊಂಡು ಸಂಬಳ ಕುಡಾ ಜಾಸ್ತಿ ಮಾಡಿದ್ದೇವೆ. 15,000 ಜಿಪಿಟಿ ಶಿಕ್ಷರು, 2500 ಹೈಸ್ಕೂಲು ಶಿಕ್ಷರು, 1000 ಪಿಯು ಶಿಕ್ಷಕರ ನೇಮಕಕ್ಕೆ ವ್ಯವಸ್ಥೆ ಮಾಡಿದ್ದೇವೆ. 15,000 ಶಿಕ್ಷಕರ ಸಿಇಟಿ ಆಗಿದೆ, ಕಾನೂನು ಕಾರಣಕ್ಕಾಗಿ ಸ್ವಲ್ಪ ತಡಾಗಿದೆ ಎಲ್ಲವನ್ನು ನಿವಾರಿಸಿಕೊಂಡು ಇನ್ನು ಹದಿನೈದು ದಿನಗಳಲ್ಲಿ ನೇಮಕಾತಿಯ ಅಂತಿಮ ಪ್ರಕ್ರಿಯೆ ನಡೆಯಲಿದೆ. ಈ ಹಿಂದಿನ ಸರಕಾರ ಎಷ್ಟು ಶಿಕ್ಷರನ್ನು ನೇಮಕ ಮಾಡಿದೆ ಎಂದು ಪ್ರಶ್ನಿಸಿದ ಸಚಿವರು ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಸಚಿವ ಅಂಗಾರ ಅವರ ಒತ್ತಡದಿಂದಾಗಿ ರಾಜ್ಯದಲ್ಲೇ ಅತೀ ಹೆಚ್ಚು ಅಂದ್ರೆ 39 ಕೊಠಡಿಗಳನ್ನು ಒಂದು ವರ್ಷದಲ್ಲಿ ನೀಡಿದ್ದೇವೆ ಎಂದರು.

ಸಮಾರ0ಭದ ಅಧ್ಯಕ್ಷತೆ ವಹಿಸಿದ್ದ ಬಂದರು ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಮಾತನಾಡಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಗೂ ಶಿಕ್ಷಣ ಕ್ಷೇತ್ರದ ಮೂಲಭೂತ ವ್ಯವಸ್ಥೆ ಕಲ್ಪಿಸುವಲ್ಲಿ ಯಾವುದೇ ರಾಜಕೀಯ ಮಾಡಿಲ್ಲ ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕ ಸುಧಾಕರ ಕೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಕಡಬ ಆರಕ್ಷಕ ಠಾಣಾಧಿಕಾರಿ ಆಂಜನೇಯ ರೆಡ್ಡಿ, ಕಡಬ ಸರಕಾರಿ ಪದವಿಪೂರ್ವ ಕಾಲೇಜಿ ಪ್ರಿನ್ಸಿಪಾಲ್ ಜನಾರ್ಧನ ಕೆ.ಎ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳ ಶಿಕ್ಷಣ ಸಚಿವರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಚಿವರು ಹಾಗೂ ಶಾಲಾ ಕ್ರೀಡಾ ಪ್ರತಿಭೆ ಚರಿಷ್ಮಾ ಅವರನ್ನು ಸನ್ಮಾನಿಸಲಾಯಿತು. ಶಾಲಾ ಬೇಡಿಕೆಗಳ ಬಗ್ಗೆ, ಅಕ್ಷರ ದಾಸೋಹ ಸಿಬ್ಬಂದಿಗಳ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಸ್ವಾಗತಿಸಿದರು. ಶಾಲಾ ವೈಸ್ ಪ್ರಿನ್ಸಿಪಾಲ್ ಡಾ|ವೇದಾವತಿ ಬಿ ವಂದಿಸಿದರು. ಶಿಕ್ಷಕರಾದ
ಆನಂದ ಆಪ್ಟೆ ಹಾಗೂ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!