“ಮಾಡಿದವನ ಪಾಪ ಆಡಿದವರ ಬಾಯಲ್ಲಿ” : ಲೇಖನ : ವಿಪಂಚಿ

ಶೇರ್ ಮಾಡಿ

ಇತ್ತೀಚೆಗೆ ನನ್ನ ಮನೆಯಲ್ಲಿ ನನ್ನ ಓದುವ ಕೋಣೆಯನ್ನು ಸ್ವಚ್ಛಗೊಳಿಸುತ್ತಿರುವಾಗ ಯಾವುದೋ ಒಂದು ಹಳೆಯ ಕನ್ನಡ ಪ್ರಶ್ನೆಪತ್ರಿಕೆ ಸಿಕ್ಕಿತು. ಸ್ವಚ್ಛತಾ ಕಾರ್ಯಕ್ಕೆ ಅಲ್ಪವಿರಾಮವಿತ್ತು ನಿಧಾನವಾಗಿ ಹಳೆಯ ಪ್ರಶ್ನೆ ಪತ್ರಿಕೆಯ ಮೇಲೆ ಒಮ್ಮೆ ಕಣ್ಣಾಡಿಸಿದೆ. ಅದು ಒಂಭತ್ತನೆ ತರಗತಿಯ ಕನ್ನಡ ಪ್ರಶ್ನೆ ಪತ್ರಿಕೆಯಾಗಿತ್ತು. ಹಾಗೆಯೇ ಅದನ್ನು ಓದುತ್ತಾ ಮುಂದುವರಿದಾಗ ” ಈ ಕೆಳಗಿನ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ ಎಂಬ ಪ್ರಶ್ನೆ ನನ್ನ ಗಮನ ಸೆಳೆಯಿತು. ಅದರಲ್ಲಿದ್ದ ಒಂದು ಗಾದೆ ಮಾತು ” ಮಾಡಿದವನ ಪಾಪ ಆಡಿದವರ ಬಾಯಲ್ಲಿ ” ಇದು ನನ್ನ ಮನಸ್ಸನ್ನು ಬಹಳಷ್ಟು ಚಿಂತನೆಗೆ ಒಳಪಡಿಸಿತು. ಇಂದಿನ ಯುಗದಲ್ಲಿ ಇಂತಹ ಗಾದೆಮಾತುಗಳು ನೇಪಥ್ಯಕ್ಕೆ ಸರಿಯುವ ಸಂದರ್ಭದಲ್ಲಿ ಅವುಗಳನ್ನು ಈಗಿನ ವಿದ್ಯಾರ್ಥಿಗಳಿಗೆ ವರ್ಗಾವಣೆ ಮಾಡುವ ಜವಾಬ್ದಾರಿ ಹಿರಿಯರಿಗೆ ಇದೆಯೆಂಬುದು ನನ್ನ ಅಭಿಪ್ರಾಯ. ನಾನು 8ನೇ ತರಗತಿಯಲ್ಲಿರುವಾಗ ನನ್ನ ಕನ್ನಡ ಪಂಡಿತರಾದ ಶ್ರೀ ವಿ ಆರ್ ಹೆಗಡೆ ಮಾಸ್ಟ್ರು ರವರ ಕಂಚಿನ ಕಂಠದಲ್ಲಿ ಕೇಳಿದ ಕಥೆ ಇನ್ನೂ ನನ್ನ ಸ್ಮೃತಿಪಟಲದಲ್ಲಿ ಸ್ವಚ್ಛವಾಗಿ ಉಳಿದಿದೆ. “ಮಾಡಿದವನ ಪಾಪ ಆಡಿದವರ ಬಾಯಲ್ಲಿ” ಗಾದೆ ಮಾತನ್ನು ವಿಸ್ತರಿಸಿ ಬರೆಯಲು ಅನುಕೂಲವಾಗುವಂತೆ ಅವರು ಒಂದು ಕಥೆಯನ್ನು ಹೇಳಿದ್ದರು.
ಒಂದು ಊರಿನಲ್ಲಿ ಒಬ್ಬ ಧರ್ಮಿಷ್ಠ ರಾಜನಿದ್ದನು. ಆತ ತನ್ನ ಪ್ರಜೆಗಳ ಯೋಗಕ್ಷೇಮಕ್ಕಾಗಿ ಅನೇಕ ಉತ್ತಮ ಕಾರ್ಯಗಳನ್ನು ನಡೆಸುತ್ತಿದ್ದನು. ಧಾರ್ಮಿಕ, ಸಾಮಾಜಿಕ, ಕೃಷಿ, ಮುಂತಾದ ಕ್ಷೇತ್ರಗಳಲ್ಲಿ ತನ್ನ ಪ್ರಜೆಗಳ ಶ್ರೇಯಸ್ಸಿಗಾಗಿ ಅವಿರತ ಚಿಂತನೆಗಳನ್ನು ಮಾಡುತ್ತಿದ್ದನು.
ಒಂದು ಸಲ ಆತನ ಸಾಮ್ರಾಜ್ಯದಲ್ಲಿ ಬರಗಾಲ ತಲೆದೋರಿತ್ತು. ಅದರ ನಿವಾರಣೆಗೋಸ್ಕರ ಆತ ತನ್ನ ಮಂತ್ರಿ ಹಾಗೂ ಧಾರ್ಮಿಕ ಗುರುಗಳ ಸಲಹೆಯಂತೆ ಒಂದು ದೊಡ್ಡ ಯಜ್ಞವನ್ನು ನಡೆಸಿದ. ತನ್ನ ಸಾಮ್ರಾಜ್ಯದ ಪ್ರಜೆಗಳೆಲ್ಲಾ ಈ ಯಜ್ಞದಲ್ಲಿ ಭಾಗವಹಿಸುವಂತೆ ಕರೆಯೋಲೆ ನೀಡಿದ. ಅದರಂತೆ ಆತನ ಸಾಮ್ರಾಜ್ಯದ ಮೂಲೆಮೂಲೆಗಳಿಂದ ಜನರು ಬಂದು ಸೇರಿದರು. ಬಂದವರಿಗೆಲ್ಲಾ ಸಂತುಷ್ಟವಾದ ಮೃಷ್ಟಾನ್ನ ಭೋಜನದ ವ್ಯವಸ್ಥೆ ಇತ್ತು. ವಿಶಾಲವಾದ ಬಯಲು ಅಂಗಣದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬ್ರಾಹ್ಮಣರಿಗೆ ಭೋಜನದ ಜೊತೆ ದಕ್ಷಿಣೆ,ಕನಕದಾನ, ಗೋದಾನ ಇತ್ಯಾದಿ ದಾನಗಳನ್ನು ನೀಡಲಾಗುತ್ತಿತ್ತು.
ಇದೇ ಸಂದರ್ಭದಲ್ಲಿ ಆಕಾಶಮಾರ್ಗದಲ್ಲಿ ಒಂದು ಗಿಡುಗ ತನ್ನ ಆಹಾರಕ್ಕಾಗಿ ಘಟಸರ್ಪ ಒಂದನ್ನು ಕಚ್ಚಿಕೊಂಡು ಹಾರಾಡುತ್ತಿತ್ತು. ಆ ಸರ್ಪದ ಬಾಯಿಯಿಂದ ಅದರ ವಿಷ ತೊಟ್ಟಿಕ್ಕುತ್ತಿತ್ತು. ಅದೇ ಬಯಲಿನಲ್ಲಿ ಕೆಳಗೆ ಬಡಿಸಲು ಇರಿಸಿದ್ದ ಅನ್ನದ ಮೇಲೆ ಹಾವಿನ ಬಾಯಿಯಿಂದ ತೊಟ್ಟಿಕ್ಕಿ ಬಿದ್ದ ವಿಷವನ್ನು ಯಾರೂ ಗಮನಿಸಲೇ ಇಲ್ಲ. ಬ್ರಾಹ್ಮಣರೆಲ್ಲಾ ಭೋಜನಕ್ಕೆ ಕೂತಾಗ ಅದೇ ಅನ್ನವನ್ನು ಬಡಿಸಲಾಯಿತು. ವಿಷ ಬಿದ್ದ ಅನ್ನವನ್ನು ಸೇವಿಸಿದ ಒಬ್ಬ ಬ್ರಾಹ್ಮಣ ಸತ್ತುಬಿದ್ದ. ತಕ್ಷಣ ಊಟದ ಬಯಲಿನಲ್ಲಿ ದೊಡ್ಡ ಗೊಂದಲ ಗದ್ದಲವೇ ನಡೆಯಿತು. ಬ್ರಾಹ್ಮಣ ಹೇಗೆ ಸತ್ತ ಏನಾಯಿತು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಅಂತೂ ರಾಜನೇ ನಡೆಸಿದ ಕಾರ್ಯಕ್ರಮವಾದ ಕಾರಣ ಯಾರಿಗೂ ಮಾತನಾಡುವ ಧೈರ್ಯವಿರಲಿಲ್ಲ. ಆದರೂ ಹಿಂದಿನಿಂದ ಮಾತನಾಡುತ್ತ ಭೋಜನವನ್ನು ತ್ಯಜಿಸಿ, ಬದುಕುಳಿದರೆ ಸಾಕು ಎಂಬಂತೆ ಎಲ್ಲರೂ ತೆರಳಿದರು . ಮಹಾರಾಜನಿಗೆ ಇದೊಂದು ಬಹಳ ದುಃಖದಾಯಕ ವಾದ ಘಟನೆಯಾಯಿತು. ಯಾವುದೇ ವಿಚಾರಣೆ ನಡೆಸಿದರು ಸತ್ಯಾಂಶ ಯಾರಿಗೂ ತಿಳಿಯಲೇ ಇಲ್ಲ.
ಇತ್ತ ಯಮಲೋಕ ಶೈಮಿನಿ ಪುರದಲ್ಲಿ ಯಮಧರ್ಮನಿಗೆ ಆತನ ಮಂತ್ರಿ ಚಿತ್ರಗುಪ್ತನಿಗೆ ಚರ್ಚೆ ನಡೆದಿತ್ತು. ಬ್ರಾಹ್ಮಣನನ್ನು ಕೊಂದವರು ಯಾರು? ಈ ಅತ್ಯಂತ ಹೀನವಾದ ಪಾಪ ಕೃತ್ಯದ ಲೆಕ್ಕವನ್ನು ಯಾರ ಹೆಸರಿಗೆ ಬರೆಯುವುದು? ಇದು ತಾರ್ಕಿಕ ಪ್ರಶ್ನೆಯಾಗಿತ್ತು. ಗಿಡುಗನ ಲೆಕ್ಕಕ್ಕೆ ಬರೆಯೋಣವೆಂದರೆ ಇಲ್ಲಿ ಗಿಡುಗನ ತಪ್ಪು ಏನೂ ಇಲ್ಲ. ಯಾಕೆಂದರೆ ಅದು ಅದರ ಆಹಾರವಾದ ಸರ್ಪವನ್ನು ಆಕಾಶಮಾರ್ಗದಲ್ಲಿ ಕೊಂಡೊಯ್ಯುತ್ತಿತ್ತು. ಹಾಗಾದರೆ ಸರ್ಪನ ಲೆಕ್ಕಕ್ಕೆ ಬರೆಯುವುದಾದರೆ…. ಅದು ಸರಿಯಲ್ಲ… ಯಾಕೆಂದರೆ… ಸರ್ಪವು ಆಗಲೇ ಸತ್ತು ಹೋಗಿದ್ದು ಅದರ ವಿಷ ತೊಟ್ಟಿಕ್ಕಿದ್ದು ಅದಕ್ಕೆ ಅರಿವೇ ಇರಲಿಲ್ಲ. ಮತ್ತೆ ಯಾರು ತಪ್ಪಿಸ್ಥರು?… ರಾಜನಿ ರಬಹುದೇ? ಅದು ಸಾಧ್ಯವಿಲ್ಲ ಯಾಕೆಂದರೆ ರಾಜನಿಗೆ ಇದು ತಿಳಿದೇ ಇಲ್ಲ. ಅನ್ನ ಬಡಿಸಿದ ವನ ತಪ್ಪಿರಬಹುದೇ?… ಅದು ಸಾಧ್ಯವಿಲ್ಲ… ಯಾಕೆಂದರೆ ಅವನಿಗೂ ವಿಷ ಬಿದ್ದಿರುವುದು ತಿಳಿದಿರುವುದಿಲ್ಲ. ಹಾಗಾದರೆ ಯಾರು ತಪ್ಪಿತಸ್ಥರು? ಈ ಪಾಪವನ್ನು ಯಾರ ಹೆಸರಿಗೆ ಬರೆಯುವುದು? ಇದು ಚಿತ್ರಗುಪ್ತನ ಗೊಂದಲ. ಈ ಗೊಂದಲವನ್ನು ಯಮಧರ್ಮನಲ್ಲಿ ತಿಳಿಸಿ ಚರ್ಚಿಸಿದಾಗ ಯಮನು ಚಿತ್ರಗುಪ್ತನನ್ನು ಸ್ವಲ್ಪ ಸಮಯ ಕಾಯಲು ಹೇಳಿದ.
ಹೀಗೆ ವರುಷಗಳು ಕಳೆದವು ಜನ ಈ ಘಟನೆಯನ್ನು ಮರೆಯುತ್ತಾ ಬಂದರು…
ಒಂದು ದಿವಸ ಬೇರೆ ರಾಜ್ಯದಿಂದ ನಾಲ್ಕು ಮಂದಿ ಬ್ರಾಹ್ಮಣರು ರಾಜನ ಅರಮನೆಗೆ ಭೇಟಿ ನೀಡುವ ಉದ್ದೇಶದಿಂದ ಬಂದಿದ್ದರು. ಅರಮನೆಗೆ ಹೋಗುವ ದಾರಿ ತಿಳಿಯದೆ ಅಲ್ಲಿಯೇ ರಸ್ತೆಬದಿಯಲ್ಲಿದ್ದ ಓರ್ವ ಹೂವಿನ ವ್ಯಾಪಾರಿ ಮಹಿಳೆಯನ್ನು ವಿಚಾರಿಸಿದರು. ಆ ಮಹಿಳೆ ಅವರಿಗೆ ಅರಮನೆಗೆ ಹೋಗುವ ದಾರಿಯನ್ನು ವಿಸ್ತಾರವಾಗಿ ವಿವರಿಸಿದಳು.ಬ್ರಾಹ್ಮಣರು ಅವಳಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಡುವಾಗ ಅವರನ್ನು ತಡೆದ ಮಹಿಳೆ “ಅಯ್ಯಾ ಬ್ರಾಹ್ಮಣೋತ್ತಮರೆ ನೀವು ಪರದೇಶದಿಂದ ಬಂದವರೆಂದು ಕಾಣುತ್ತದೆ. ನಿಮಗೆ ಒಂದು ವಿಷಯ ತಿಳಿದಿರಲಿ….. ನೀವು ಭೇಟಿ ಮಾಡಲು ಹೊರಟಿರುವ ರಾಜ ಒಬ್ಬ ಬ್ರಹ್ಮಹತ್ಯಾದೋಷಿ… ಎರಡು ವರ್ಷಗಳ ಹಿಂದೆ ಆತ ಒಬ್ಬ ಬ್ರಾಹ್ಮಣನನ್ನು ಅನ್ನದಲ್ಲಿ ವಿಷ ಹಾಕಿ ಕೊಂದಿದ್ದಾನೆ…. ನೀವು ಸ್ವಲ್ಪ ಜಾಗ್ರತೆವಹಿಸಿ” ಎಂದಳು. ಅದನ್ನು ಕೇಳಿ ಹೆದರಿದ ಆ ಬ್ರಾಹ್ಮಣರು ಅಲ್ಲಿಂದಲೇ ಹಿಂತಿರುಗಿ ಅವರ ದೇಶಕ್ಕೆ ಹೊರಟರು.
ಇದೆಲ್ಲವನ್ನೂ ನೋಡುತ್ತಿದ್ದ ಯಮಧರ್ಮ ಮತ್ತು ಚಿತ್ರಗುಪ್ತ ಆಶ್ಚರ್ಯ ಚಕಿತರಾಗುತ್ತಾರೆ. ಯಾಕೆಂದರೆ ಸತ್ಯಾಂಶ ಏನು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಇಲ್ಲಿ ಆ ಮಹಿಳೆ ನಿಜಾಂಶ ಏನೆಂದು ತಿಳಿಯದೆ ಯಾರೋ ಹೇಳಿದ್ದನ್ನು ಊಹಿಸಿಕೊಂಡು ತಾನು ಕಣ್ಣಾರೆ ನೋಡಿದ ರೀತಿಯಲ್ಲಿಯೇ ಆ ಬ್ರಾಹ್ಮಣರಲ್ಲಿ ಅವಳು ರಾಜನ ಮೇಲೆ ಕೊಲೆ ಪಾತಕದ ಆರೋಪವನ್ನು ಹೇರುತ್ತಾಳೆ. ಯಮಧರ್ಮ ಚಿತ್ರಗುಪ್ತ ನಲ್ಲಿ ಹೇಳಿದ ” ಚಿತ್ರಗುಪ್ತ ನೇ 2 ವರ್ಷಗಳ ಹಿಂದೆ ಹಾವಿನ ವಿಷದಿಂದ ಸತ್ತುಹೋದ ಬ್ರಾಹ್ಮಣನ ಸಾವಿನ ಪಾಪವನ್ನು ಯಾರ ಲೆಕ್ಕಕ್ಕೆ ಬರೆಯಲಿ? ಎಂದು ಕೇಳುತ್ತಿದ್ದೆ ಅಲ್ಲವೇ…. ಈಗ ಆ ಪಾಪ ವನ್ನು ಆ ಮಹಿಳೆಯ ಲೆಕ್ಕಕ್ಕೆ ಬರಿ…. ನಿಜವಾದ ಪಾಪಿ ಆ ಮಹಿಳೆ” ಎಂದ. ಕೂಡಲೇ ಚಿತ್ರಗುಪ್ತ ಆ ಮಹಿಳೆಯ ಪಾಪಗಳ ಸಂಖ್ಯೆಗೆ ಬ್ರಹ್ಮಹತ್ಯಾ ಪಾತಕವನ್ನು ಸೇರಿಸಿದ…. ಅವಳ ಆಯುಷ್ಯ ಮುಗಿದು ಶೈಮಿನಿ ಗೆ ಬರಲಿ ಕಾದು ನೋಡೋಣ ಎಂದ.
ಪ್ರಿಯ ಓದುಗರೇ ಇದು ಒಂದು ಗಾದೆ ಮಾತಿಗೆ ಕಟ್ಟಿರುವ ಹಳೆಯ ಕಥೆ. ಆದರೆ ಇದರ ಒಳಾರ್ಥ ಎಷ್ಟು ಅರ್ಥಪೂರ್ಣವಾಗಿದೆ ಎಂದರೆ… ಪ್ರಸಕ್ತ ಸಮಾಜದಲ್ಲಿ ಕಲಹಗಳನ್ನು ಉಂಟುಮಾಡುವವರು, ಒಬ್ಬರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ವರು, ಅಥವಾ ಕೋಮುಸೌಹಾರ್ದತೆ ಗಳನ್ನು ಕೆಡಿಸುವವರು, ಉತ್ತಮ ಸೇವಾಕಾರ್ಯಗಳನ್ನು ನಡೆಸುವವರ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಬಿತ್ತುವವರು… ಮುಂತಾದವರಿಗೆ ಈ ಗಾದೆಮಾತು ಬಹಳಷ್ಟು ಒಪ್ಪುವುದು. ತುಳುವಿನಲ್ಲಿ ಒಂದು ಗಾದೆ ಮಾತಿದೆ ” ಎಲಿ ಪೋಯಿನೈಟೆ ಪಿಲಿ ಪೋಂಡಿಗೆ ” ಅಂದರೆ ಇಲಿ ಹೋದಲ್ಲಿ ಹುಲಿ ಹೋಯಿತು ಎಂದು. ನಿಜವಾಗಿ ಹೋದದ್ದು ಇಲಿ ಆದರೆ… ಅದು ಕೆಲವರ ಬಾಯಿಗೆ ಸಿಕ್ಕಿ ಇಲಿ ಹೋಗಿ ಹುಲಿ ಆಗುವುದು. ಸಣ್ಣ ಅಪಘಾತವಾದರೆ ಕೆಲವರು ಅದನ್ನು ಭಯಾನಕವಾಗಿ ಸೃಷ್ಟಿಸಿ ಹೇಳುವುದು…. ಮತ್ತೊಬ್ಬರ ವಿಚಾರಗಳನ್ನು ತಿಳಿಯದೆ ಅವರ ಬಗ್ಗೆ ನಕಾರಾತ್ಮಕವಾದ ಭಾವನೆಗಳನ್ನು ಪ್ರಚಾರ ಮಾಡುವುದು…. ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಲ್ಲಿ ಎರಡು ಮಾತಿಲ್ಲ. ಅದಕ್ಕಾಗಿಯೇ ಹಿರಿಯರು ಹೇಳಿದ ಮಾತು. “ವೇದ ಸುಳ್ಳಾದರು ಗಾದೆ ಸುಳ್ಳಾಗದು” ಎಂದು. ” ಮಾಡಿದವನ ಪಾಪ ಆಡಿದವರ ಬಾಯಲ್ಲಿ” ಎಂಬ ಗಾದೆಯಂತೆ ನಾವು ಇನ್ನೊಬ್ಬರ ಬಗ್ಗೆ ನಕಾರಾತ್ಮಕವಾಗಿ ವ್ಯವಹರಿಸದೆ…. ಅವರಲ್ಲಿರುವ ಉತ್ತಮ ಗುಣ ಅಥವಾ ವ್ಯಕ್ತಿಯೊಬ್ಬ ಮಾಡಿದ ಉತ್ತಮ ಕಾರ್ಯಗಳನ್ನು ಪ್ರಶಂಸಿಸಿ ಅಭಿನಂದಿಸಿದರೆ ಆ ವ್ಯಕ್ತಿಯಲ್ಲಿ.. ಮುಂದೆಯೂ ಉತ್ತಮ ಕಾರ್ಯಗಳನ್ನು ಮಾಡುವ…. ಉತ್ಸಾಹ ಮುಂದುವರೆಯುತ್ತದೆ.ನಕಾರಾತ್ಮಕ ಭಾವನೆಗಳು ಪ್ರತಿಯೊಬ್ಬನನ್ನು ಮಾನಸಿಕವಾಗಿ ಕೆಡಿಸುತ್ತದೆ.
ಆದುದರಿಂದ ನಾವು ಸದಾ ಸಕಾರಾತ್ಮಕ ಮನೋಭಾವನೆಯನ್ನು ಹೊಂದಿ ಈ ಜನ್ಮವನ್ನು ಸಾರ್ಥಕ ಗೊಳಿಸಿದರೆ…. ಚಿತ್ರಗುಪ್ತನ ಪಾಪದ ಪಟ್ಟಿಯಲ್ಲಿ ಒಂದು ಸಂಖ್ಯೆ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ.
                                                                                                                                    

 

ವಿಶ್ವನಾಥ ಶೆಟ್ಟಿ ಕೆ
ಉಪನ್ಯಾಸಕರು
ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿ
9741132215

ಜಾಹೀರಾತು

Leave a Reply

error: Content is protected !!