ಕೌಕ್ರಾಡಿ : ಗ್ರಾಮ ಪಂಚಾಯತ್ ಕೌಕ್ರಾಡಿ ನ 2022 -23ನೇ ಸಾಲಿನ ಗ್ರಾಮ ಸಭೆಯು ಫೆ.04 ರಂದು ಗ್ರಾಮ ಪಂಚಾಯತ್ ಸಭಾಭವನ ಕೌಕ್ರಾಡಿಯಲ್ಲಿ ನಡೆಯಿತು.
ನೋಡಲ್ ಅಧಿಕಾರಿಯಾಗಿ ಕಡಬ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಅಜಿತ್ ಭಾಗವಹಿಸಿದ್ದರು.
ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಮೆಸ್ಕಾಂ ಇಲಾಖೆ, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು ತಮ್ಮ ತಮ್ಮ ಇಲಾಖೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಸುಬ್ರಹ್ಮಣ್ಯದಿಂದ ಕಾರ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ ಪ್ರಸ್ತಾವನೆಯಲ್ಲಿ ಇಚ್ಲಂಪಾಡಿ ಮೂಲಕವೇ ರಸ್ತೆಯು ಹಾದು ಹೋಗುವಂತೆ ಆಗಬೇಕು. ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶ ನೀಡುವುದಿಲ್ಲ ಈ ಬಗ್ಗೆ ರಾಷ್ಟ್ರೀಯ ರಸ್ತೆ ಪ್ರಾಧಿಕಾರಕ್ಕೆ ಹಾಗೂ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಅಂಗಡಿಗಳನ್ನು 15 ದಿನಗಳ ಒಳಗೆ ಸಂಬಂಧಪಟ್ಟ ಅಧಿಕಾರಿಗಳನ್ನೊಳಗೊಂಡು ತೆರೆವು ಗೊಳಿಸುವ ಬಗ್ಗೆ ನಿರ್ಣಯಿಸಲಾಯಿತು.
ರೈತರಿಗೆ ಅರಣ್ಯ ಇಲಾಖೆಯವರು ನೀಡುವ ಗಿಡಗಳನ್ನು ಸಂಬಂಧಪಟ್ಟ ನರ್ಸರಿಗಳಿಂದ ತರಲು ರೈತರಿಗೆ ಅಧಿಕ ವೆಚ್ಚ ತಗಲುವುದರಿಂದ, ಅರಣ್ಯ ಇಲಾಖೆಯವರೇ ಗ್ರಾಮ ಪಂಚಾಯತ್ ಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕು ಹಾಗೂ ಹಿಂದೆ ಇಲಾಖೆಯಿಂದ ಗ್ಯಾಸ್, ಸೋಲಾರ್ ನೀಡಲಾಗುತ್ತಿತ್ತು ಇದನ್ನು ಮುಂದುವರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಇಲಾಖೆಗೆ ಪತ್ರ ಬರೆಯುವ ಬಗ್ಗೆ ನಿರ್ಣಯಿಸಲಾಯಿತು.
ಕೌಕ್ರಾಡಿ ಗ್ರಾಮ ವ್ಯಾಪ್ತಿಯ ಗೌಡಸಾಗು ಎಂಬಲ್ಲಿ ಹೊಸದಾಗಿ ಅಂಗನವಾಡಿ ತೆರೆಯುವ ಬಗ್ಗೆ, ಕೆ ಎಸ್ ಆರ್ ಟಿ ಸಿ ಮತ್ತು ಪೊಲೀಸ್ ಸ್ಟೇಷನ್ ಗೆ ಕಾದಿರಿಸಿದ ಜಾಗದ ಮಧ್ಯದಲ್ಲಿ 30 ವರ್ಷಗಳ ಹಿಂದೆ ನಕ್ಷೆಯಲ್ಲಿ ಶಾಂತಿಬೆಟ್ಟು ಹೋಗುವ ರಸ್ತೆ ನಮೂದೆಯಾಗಿದ್ದು ಆ ರಸ್ತೆಯನ್ನು ಯಥಾ ಪ್ರಕಾರ ಕಾಯ್ದಿರಿಸುವಂತೆ, ಕುಂಡಡ್ಕ ರಸ್ತೆಗೆ ಸಂಪರ್ಕಿಸುವ ರಸ್ತೆಯು ಅತ್ಯಂತ ಕಿರಿದಾಗಿದ್ದು ಬಗ್ಗೆ ಹಿಂದೆ ಮನವಿಯನ್ನು ನೀಡಿದ್ದೇವೆ ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು ಹಾಗೂ ಮರು ಮನವಿಯನ್ನು ನೀಡಲಾಯಿತು. ರಸ್ತೆ ಅಗಲೀಕರಣಗಳಿಂದಾಗಿ ಆಟೋ ತಂಗುದಾಣ ಇಲ್ಲದಂತಾಗಿದೆ ಈ ಬಗ್ಗೆ ಜಾಗವನ್ನು ಕಾದಿರಿಸುವಂತೆ ಆಟೋರಿಕ್ಷ ಚಾಲಕರು ಮನವಿಯನ್ನು ನೀಡಿದರು. ಕಲ್ಲಡ್ಕ ಎಂಬಲ್ಲಿ ನೀರಿನ ಟ್ಯಾಂಕ್ ರಚಿಸಲು ಸ್ಥಳ ಗುರುತು ಮಾಡಿ ಕೊಡುವಂತೆ ಮನವಿ ಮಾಡಲಾಯಿತು.
ಇಚ್ಲಂಪಾಡಿ ಎಂಬಲ್ಲಿ 98 ಸರ್ವೆ ನಂಬರ್ ನ ಜಾಗದಲ್ಲಿ ಆಶ್ರಮಕ್ಕೆ, ಸ್ಮಶಾನ ನಿರ್ಮಾಣಕ್ಕೆ, ಸಾರ್ವಜನಿಕ ಆಟದ ಮೈದಾನಕ್ಕೆ ಜಾಗ ನೀಡುವಂತೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಲಾಯಿತು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚತುಷ್ಪಥ ಕಾಮರಿಗಾರಿ ನಡೆಯುವ ಹಿನ್ನೆಲೆ ವಿಪರೀತ ಧೂಳಿರುವ ಕಾರಣ ಶಾಲಾ ಮಕ್ಕಳಿಗೆ ಪಾಠ ಕೇಳಲು ಹಾಗೂ ಬೆಳಗ್ಗೆ ಹಾಗೂ ಸಂಜೆ ಸಂಚರಿಸಲು ಕಷ್ಟವಾಗುತ್ತಿದೆ ಹಾಗೂ ಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ತೊಂದರೆ ಆಗುತ್ತಿದೆ ಎಂದು ಸಮೂಹ ಸಂಪನ್ಮೂಲ ಅಧಿಕಾರಿ ಪ್ರಕಾಶ್ ತಿಳಿಸಿದರು. ಈ ಬಗ್ಗೆ ಕಾಮಗಾರಿಗೆ ವೇಗ ಹೆಚ್ಚಿಸಿ, ಮುಂದಿನ ಮೂರು ತಿಂಗಳುಗಳ ಕಾಲ ಬೇಸಿಗೆ ಇರುವುದರಿಂದ ಕಾಮಗಾರಿ ವೇಳೆ ದೂಳು ಬರದಂತೆ ನೀರು ಹಾಯಿಸಿ ಕಾಮಗಾರಿ ನಡೆಸುವಂತೆ ಪಂಚಾಯಿತಿನಿಂದ ಮನವಿ ಮಾಡುವಂತೆ ಕೇಳಿಕೊಂಡರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ವನಿತಾ ಎಂ, ಉಪಾಧ್ಯಕ್ಷರಾದ ಶ್ರೀಮತಿ ಜಿ ಭವಾನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಜಿ ಎನ್ ಮತ್ತು ಸದಸ್ಯರು, ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಸ್ವಾಗತದೊಂದಿಗೆ ವರದಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಜಿ ಎನ್ ನೆರವೇರಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಬಾಣಜಾಲು ವಂದಿಸಿದರು.