ಕೊಕ್ಕಡ ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ದೈವದ ಕೋಲ

ಶೇರ್ ಮಾಡಿ

ಕೊಕ್ಕಡ: ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೇರ್ಕಳ ಸ್ವಾಮಿ ಕೊರಗಜ್ಜ ಮತ್ತು ಪರಿವಾರ ದೈವಗಳ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ದೈವದ ಕೋಲ ಫೆಬ್ರವರಿ 14 ರಿಂದ ಫೆಬ್ರವರಿ 15ರವರೆಗೆ ನಡೆಯಿತು.

ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘ ನಿ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್ ಉದ್ಘಾಟಿಸಿ ಮಾತನಾಡಿ

ಇಲ್ಲಿಗೆ ಭಕ್ತಿ, ಭಾವದಿಂದ ಬಂದವರಿಗೆ ಇಲ್ಲಿಯ ದೈವ ದೇವರುಗಳು ಯಾವುದೇ ಕಾರಣಕ್ಕೂ ಬಿಡಲಾರವು. ಈ ಮಣ್ಣಿನಲ್ಲಿ ಸತ್ಯ ಇದೆ, ಭಕ್ತಿ ಇದೆ, ಸತ್ಯದಿಂದ ನಡೆದವರಿಗೆ ಭಕ್ತಿಯಿಂದ ಬಂದವರಿಗೆ ಆ ದೇವರು ಯಾವತ್ತೂ ಕೈ ಬಿಡುವುದಿಲ್ಲ ಎಂಬುದನ್ನು ನನ್ನ ಸ್ವಂತ ಅನುಭವದಿಂದ ಕಂಡುಕೊಂಡವಳು. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಆಗಬೇಕು ನಾವೆಲ್ಲ ಸೇರಿಕೊಂಡು ಅದನ್ನು ನೆರವೇರಿಸೋಣ ಎಂದರು.

ಕಾರ್ಯಕ್ರಮದ ಅತಿಥಿಗಳಾದ ಉಪ್ಪಿನಂಗಡಿ ಸರ್ಕಲ್ ಇನ್ಸ್ಪೆಕ್ಟರ್ ರವಿ ಪಿ.ಎಸ್ ರವರು ಮಾತನಾಡಿ ಕೊರೋನದಂತ ಈ ಕಾಲಘಟ್ಟದಲ್ಲಿ ನಮ್ಮ ಮನಃಶಾಂತಿಗೆ ಏನು ಬೇಕು ಅಥವಾ ಬೇಡ ಎಂಬುದನ್ನು ಮರೆತು ತಂತ್ರಜ್ಞಾನಕ್ಕೆ ಮಾರು ಹೋಗಿದ್ದೇವೆ. ಕಳೆದ ಮೂರು ವರ್ಷಗಳಿಂದ ಇಲ್ಲಿ ವಾರ್ಷಿಕೋತ್ಸವದ ಆಚರಿಸುತ್ತಿದ್ದು ಇದೇ ರೀತಿ ಮುಂದುವರೆಯಲಿ ಎಂದು ಆಶಿಸುತ್ತಾ. ಜನಗಳಿಗೆ ಬೇಕಾಗಿರುವುದು ಮನಶಾಂತಿ ಹಾಗಾಗಿ ಎಲ್ಲರೂ ಒಂದೆಡೆ ಸೇರಿ ಒಂದು ಧಾರ್ಮಿಕವಾದ ಆಚಾರ, ವಿಚಾರಗಳಲ್ಲಿ, ಧಾರ್ಮಿಕ ಪ್ರವಚನಗಳಲ್ಲಿ ಭಾಗವಹಿಸುವುದರ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಂಡು ಒಂದು ಪರೋಪಕಾರಿಯಾಗಿ ಬದುಕುವಂತ ದಿಕ್ಕನ್ನು ಈ ಸ್ವಾಮಿ ಕೊರಗಜ್ಜ ದೈವ ಎಲ್ಲರಿಗೂ ತೋರಿಸಿಕೊಡಲಿ ಎಂದು ನುಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅತಿಥಿ ಸ್ಥಾನದಿಂದ ಮಾತನಾಡಿದ ಅವರು ಹೆಚ್ಚಿನ ದೈವಗಳು ಹಿಂದುಳಿದ, ಶೋಷಣೆಗೊಳಗಾದ ಧರ್ಮಗಳಿಂದ, ಬೇರೆ ಬೇರೆ ಸಮಾಜಗಳಿಂದ ಬಂದಂತ ದೈವಗಳು ಅವರು ಯಾರು ಜಾತಿ, ಧರ್ಮ ಮಾಡಲಿಲ್ಲ. ನಮ್ಮ ತುಳುನಾಡಿನ ಇತಿಹಾಸದಲ್ಲಿ ಕೋಟಿ ಚೆನ್ನೆಯರು ಹಾಗೂ ಆದಿಮೊಗೇರ್ಕಳ ದೈವಗಳು ಜೊತೆಯಾಗಿ ಜೊತೆಯಾಗಿ ಇದ್ದ, ಬೇಟೆಗೆ ಹೋದ ಬಗ್ಗೆ, ಒಂದೇ ಮನೆಯಲ್ಲಿ ಒಂದೇ ತಾಯಿಯ ಜೊತೆಯಲ್ಲಿ ಇದ್ದ ಇತಿಹಾಸವಿದೆ. ಕೊರಗಜ್ಜನ ಸಾಕು ತಾಯಿ ಬೇರೆ ಜಾತಿಯವರಾಗಿದ್ದರು ಅತ್ಯಂತ ಪ್ರೀತಿಯಿಂದ ಸಾಕಿದ್ದಾರೆ, ಆದರೆ ಇಂದು ನಾವು ಜಾತಿ, ಧರ್ಮ, ಭೇದ ಮಾಡುತ್ತಿದ್ದೇವೆ ಆದರೆ ಈ ಜಾಗದಲ್ಲಿ ನಾವೆಲ್ಲರೂ ಒಂದಾಗಿ ಸೇರಿದ್ದೇವೆ. ಎಲ್ಲರಿಗೂ ದೈವದ ಆಶೀರ್ವಾದ ಸಿಗಲಿ ಎಂದು ಹಾರೈಸಿದರು. ನಾವು ನಂಬುವ ದೇವರ ಕಾಂಪೌಂಡ್ ಕುಸಿದಿದೆ, ಇದು ಹಾಗೆ ಇರುವುದು ನಮಗೆ ಶೋಭೆ ತರುವುದಿಲ್ಲ, ನಾವೆಲ್ಲ ಒಂದಾಗಿ ಅದಕ್ಕೆ ಗಡಿ ಹಾಕಿ, ನಾವೆಲ್ಲರೂ ಕೈಜೋಡಿಸಿ ಅದನ್ನು ಅತ್ಯಂತ ತುರ್ತಾಗಿ ಕೆಲಸವನ್ನು ಪೂರ್ಣಗೊಳಿಸೋಣ ಎಂದು ಈ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಟ್ಲಡ್ಕ ಕೌಕ್ರಾಡಿ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್(ರಿ) ಅಧ್ಯಕ್ಷರಾದ ತುಕ್ರಪ್ಪ ಶೆಟ್ಟಿ ನೂಜೆ ಮಾತನಾಡಿ ಪ್ರತಿ ಭಾನುವಾರ ಮಧ್ಯಾಹ್ನದವರೆಗೆ ಪ್ರಾರ್ಥನೆ ಸಲ್ಲಿಸುವರಿಗೆ ಅವಕಾಶವಿದೆ, ದಿನದಿಂದ ದಿನಕ್ಕೆ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಅದೇ ರೀತಿ ಭಕ್ತಾದಿಗಳ ಪ್ರಾರ್ಥನೆಯಂತೆ ಕ್ಷೇತ್ರದಲ್ಲಿ ನಡೆದ ಪವಾಡಗಳ ಬಗ್ಗೆ ತಿಳಿಸಿದರು ಹಾಗೂ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಇನ್ನು ಅನೇಕ ಕೆಲಸ ಕಾರ್ಯಗಳು ಆಗಬೇಕಾಗಿದೆ ಎಲ್ಲರ ಸಹಕಾರವನ್ನು ಈ ಸಂದರ್ಭದಲ್ಲಿ ಕೋರಿದರು.
ವೇದಿಕೆಯಲ್ಲಿ ಕ್ಯಾನ್ಸರ್ ತಜ್ಞರಾದ ಡಾ.ರಘು ಬೆಳ್ಳಿಪಾಡಿ, ಸೌತಡ್ಕದ ಉದ್ಯಮಿ ಬಾಲಕೃಷ್ಣ ನೈಮಿಷ, ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಬಾಣಜಾಲು, ಉಪಾಧ್ಯಕ್ಷರಾದ ಹರೀಶ್ ಪಿ ಪಟ್ಲಡ್ಕ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ದೀಕ್ಷಾ ಚಂದನ್ ಉಪಸ್ಥಿತರಿದ್ದರು.

ಸನ್ಮಾನ
ದೈವದ ನೇಮೋತ್ಸವಕ್ಕೆ ಹಾಗೂ ದೈವಸ್ಥಾನಕ್ಕೆ ಧನ ಸಹಾಯ ನೀಡಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಮತಿ ದೀಕ್ಷಾ ಚಂದನ್ ವರದಿ ವಾಚಿಸಿದರು, ಜೊತೆ ಕಾರ್ಯದರ್ಶಿ ಮಕರಂದ ಸ್ವಾಗತಿಸಿ, ಸುಧೀರ್ ಕುಮಾರ್, ಸುರೇಶ್ ಪಡಿಪಂಡ ನಿರೂಪಿಸಿದರು. ಲೋಕೇಶ್ ಬಾಣಜಾಲು ವಂದಿಸಿದರು.

ಸಭಾ ವೇದಿಕೆಯಲ್ಲಿ ಲಹರಿ ಸಂಗೀತ ಕಲಾಕೇಂದ್ರ ಐ ಐ ಸಿ ಟಿ ನೆಲ್ಯಾಡಿ ಇವರಿಂದ “ರಾಗಾಂತರಂಗ” ಸಂಗೀತ ಕಾರ್ಯಕ್ರಮ ಜರಗಿತು. ರಾತ್ರಿ ಗಂಟೆ 8.00ಕ್ಕೆ ಅನ್ನಸಂತರ್ಪಣೆ, ಬಳಿಕ ರಾತ್ರಿ ಗಂಟೆ 9:30ಕ್ಕೆ ಶ್ರೀ ಗಡಿಯಾಡಿ ಆದಿ ಮೊಗೇರ್ಕಳ ದೈವಗಳ ಗರಡಿ ಇಳಿಯುವುದು, ರಾತ್ರಿ ಗಂಟೆ 12:30 ಕ್ಕೆ ಶ್ರೀ ತನ್ನಿ ಮಾನಿಗ ದೈವದ ಗರಡಿ ಇಳಿಯುವುದು ಹಾಗೂ ದಿನಾಂಕ ಫೆಬ್ರವರಿ 15ರ ಬುಧವಾರ ಬೆಳಗ್ಗೆ 6:30 ರಿಂದ ಸ್ವಾಮಿ ಕೊರಗಜ್ಜ ದೈವದ ಕೋಲ ಹಾಗೂ ಹರಕೆಯ ಅಗೇಲು ಸೇವೆ ನೆರವೇರಿತು.
ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ಗಿರೀಶ್ ಡಿ ನೆಲ್ಯಾಡಿ, ಕೋಶಾಧಿಕಾರಿ ಪ್ರಕಾಶ್ ರೈ, ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸತೀಶ್, ಉಪಾಧ್ಯಕ್ಷರಾದ ಶ್ರೀಮತಿ ಮಮತಾ ಹರೀಶ್ ಹಾಗೂ ಸರ್ವ ಸದಸ್ಯರು ಸಹಕರಿಸಿದರು.

Leave a Reply

error: Content is protected !!