




ಮಂಗಳೂರು: ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಆರಂಭವಾಗಿರುವ ಕರಾವಳಿಯ ಮೊದಲ ತಾಯಿ ಹಾಲಿನ ಬ್ಯಾಂಕ್ (ಹ್ಯೂಮನ್ ಮಿಲ್ಕ್ ಬ್ಯಾಂಕ್)ಗೆ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಗುತ್ತಿದ್ದು, ಪ್ರತೀ ತಿಂಗಳು ದಾನಿಗಳ ಸಂಖ್ಯೆ ಹೆಚ್ಚುತ್ತಿದೆ.
2022ರ ಮಾರ್ಚ್‌ನಲ್ಲಿ ಕಾರ್ಯಾರಂಭಿಸಿದ ಮಿಲ್ಕ್ ಬ್ಯಾಂಕ್‌ಗೆ ಜನವರಿ ಅಂತ್ಯದ ವರೆಗೆ 3,300 ತಾಯಂದಿರು ಹಾಲನ್ನು ನೀಡಿದ್ದಾರೆ. ಈ ಹಾಲನ್ನು ಪ್ಯಾಶ್ಚರೈಸೇಶನ್ ಪ್ರಕ್ರಿಯೆಗೆ ಒಳಪಡಿಸಿ ಆಸ್ಪತ್ರೆಯ ಎನ್‌ಐಸಿಯುನಲ್ಲಿದ್ದ/ಇರುವ ಅವಧಿ ಪೂರ್ವ ಜನಿಸಿದ ಸುಮಾರು 68 ಮಕ್ಕಳಿಗೆ ಮತ್ತು ವೆನ್ಲಾಕ್ ನ ಆರ್‌ಎಪಿಸಿಸಿ ಮಕ್ಕಳ ಕೇಂದ್ರದಲ್ಲಿರುವ ಮಕ್ಕಳಿಗೆ ನೀಡಲಾಗಿದೆ.

ಜಾಗೃತಿ ಕಾರ್ಯಕ್ರಮವೇ ದಾನಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ. ಆರಂಭದಲ್ಲಿ ತಾಯಂದಿರ ಮನವೊಲಿಕೆ ತುಸು ತ್ರಾಸದಾಯಕವಾಗಿತ್ತು. ಪ್ರಸ್ತುತ ಅವರೇ ಹಾಲು ದಾನಕ್ಕೆ ಮುಂದಾಗುತ್ತಿದ್ದಾರೆ. ದಾನಿಗಳಿಂದ ಒಪ್ಪಿಗೆ ಪತ್ರಕ್ಕೆ ಸಹಿ ಪಡೆದು, ಸಾಮಾನ್ಯ ತಪಾಸಣೆ, ಎಚ್‌ಐವಿ, ಹೆಪಟೈಟಿಸ್ ಬಿ. ಮತ್ತು ಸಿ., ವಿಆರ್‌ಡಿಎಲ್ ತಪಾಸಣೆಗೆ ಒಳಪಡಿಸಿ ನೆಗೆಟಿವ್ ವರದಿ ಬಂದಿ ಬಳಿಕ ಹಾಲು ಸಂಗ್ರಹಿಸಲಾಗುತ್ತದೆ. ಅದನ್ನು ಪ್ಯಾಶ್ಚರೀಕರಿಸಿ ಸ್ಯಾಂಪಲನ್ನು ವೆನ್ಲಾಕ್ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನೆಗೆಟಿವ್ ರಿಪೋರ್ಟ್ ಬಂದ ಬಳಿಕ ಮಕ್ಕಳಿಗೆ ನೀಡಲಾಗುತ್ತದೆ. ಈ ಹಾಲನ್ನು 6 ತಿಂಗಳ ಕಾಲ ಸಂಗ್ರಹಿಸಿಟ್ಟುಕೊಳ್ಳಬಹುದು. ಸಂಗ್ರಹ, ಬಳಕೆ ಹಾಗೂ ಉಳಿಕೆ ಎಲ್ಲವೂ ಆಗುತ್ತಿದೆ.
ತಾಯಂದಿರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಎದೆಹಾಲಿನ ಬ್ಯಾಂಕ್ ಯಶಸ್ವಿಯಾಗಿ ನಡೆಯುತ್ತಿದೆ. ಅವಧಿ ಪೂರ್ವ ಜನಿಸುವ ಶಿಶುಗಳಿಗೆ ಇದು ಹೆಚ್ಚು ಸಹಕಾರಿ. ಕೃತಕ ಹಾಲಿನ ಬದಲು ತಾಯಿ ಹಾಲನ್ನೇ ಕೊಡುವುದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ.