ನಿಡ್ಲೆ: ಶಿವರಾತ್ರಿ ಪಾದಯಾತ್ರೆಗೆ ಸಂಬಂಧಪಟ್ಟಂತೆ ದಕ ಜಿಲ್ಲಾ ಅರಣ್ಯ ಇಲಾಖೆ ನಿರ್ವಹಿಸಿದ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡ ರಾಜ್ಯದ ನಾನಾ ಜಿಲ್ಲೆಗಳ ಹಲವು ಸಾವಿರ ಭಕ್ತರು ಚಾರ್ಮಾಡಿ ಘಾಟಿ ಹಾಗೂ ಶಿರಾಡಿ ಘಾಟಿಗಳ ಮೂಲಕ ಆಗಮಿಸಿದ್ದಾರೆ. ಇವರಿಗೆ ಕುಡಿಯಲು ನೀರಿನ ವ್ಯವಸ್ಥೆ, ಹೆಚ್ಚಿನ ಮಾಹಿತಿ, ವಿವರ ಇತ್ಯಾದಿಗಳನ್ನು ನೀಡಲು ಚಾರ್ಮಾಡಿ ಘಾಟಿ ಹಾಗೂ ಶಿರಾಡಿ ಘಾಟಿಯ ಏಳು ಸ್ಥಳಗಳಲ್ಲಿ ಅರಣ್ಯ ಇಲಾಖೆ ಸ್ಟಾಲ್ ಗಳನ್ನು ನಿರ್ಮಿಸಿ ಸುಮಾರು 40 ಸಿಬ್ಬಂದಿ 20 ಸಹ ಸಿಬ್ಬಂದಿ ಹಾಗೂ ಸ್ಥಳೀಯರ ಜತೆ ಸೇವೆ ನೀಡಿತ್ತು. ಅಗತ್ಯ ಸಂದರ್ಭ ಅನಾರೋಗ್ಯ ಕಂಡು ಬಂದ ಪಾದಯಾತ್ರಿಗಳಿಗೂ ಸಹಕಾರ ನೀಡಲಾಗಿತ್ತು.
ದಾರಿಯುದ್ದಕ್ಕೂ ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇರಿಸಿ ಕಾಡಿನ ಭಾಗದಲ್ಲಿ ಕಸ ಹಾಕದಂತೆ ಎಚ್ಚರಿಕೆ ವಹಿಸಿತ್ತು. ರಾತ್ರಿ ಸಮಯ ಘಾಟಿ ಪ್ರದೇಶದಲ್ಲಿ ಪಾದಯಾತ್ರಿಗಳಿಗೆ ವನ್ಯಮೃಗಗಳಿಂದ ತೊಂದರೆ ಉಂಟಾಗದಂತೆಯು ಮುನ್ನೆಚ್ಚರಿಕೆ ವಹಿಸಲಾಗಿತ್ತು. ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ, ಚಾರ್ಮಾಡಿ ಘಾಟಿಯಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇಲ್ಲದಿದ್ದರೂ ಸಿಬ್ಬಂದಿ ತಮ್ಮ ಸ್ವಂತ ವಾಹನಗಳಲ್ಲಿ ನೆಟ್ವರ್ಕ್ ಇರುವ ಸ್ಥಳಗಳಿಗೆ ಹೋಗಿ ಕೈಗೊಳ್ಳಬೇಕಾದ ವ್ಯವಸ್ಥೆಗಳಿಗೆ ಅಹರ್ನಿಶಿ ಸಂವಹನ ನಡೆಸಿದ್ದಾರೆ.
ಸ್ವಚ್ಛತೆ:
ಕಸದ ಬುಟ್ಟಿ ಇದ್ದರೂ ಘಾಟಿ ವಿಭಾಗದ ಅಲ್ಲಲ್ಲಿ ಕಂಡುಬಂದಿದ್ದ ಕಸವನ್ನು ಇಲಾಖೆಯ ಸಿಬ್ಬಂದಿ ಶನಿವಾರ ಸಂಜೆಯೊಳಗೆ ಸಂಪೂರ್ಣ ಸ್ವಚ್ಛತೆಗೊಳಿಸಿದ್ದಾರೆ. ಇದರಿಂದ ದ.ಕ ವಿಭಾಗದ ಘಾಟಿ ಪರಿಸರದಲ್ಲಿನ ಸೌಂದರ್ಯ ಇನ್ನಷ್ಟು ಹೆಚ್ಚಿದೆ.
ಹಸಿರು ತಪಸ್ಸು ಸಹಕಾರ:
ಅರಣ್ಯ ಇಲಾಖೆಯ ಜತೆ ಹಸಿರು ತಪಸ್ಸು ತಂಡದ ಸದಸ್ಯರು ಮುಂಡಾಜೆ, ಕಲ್ಮಂಜ ಭಾಗಗಳಲ್ಲಿ ಕಸ ಹಾಕಲು ಗೋಣಿ ಚೀಲಗಳನ್ನು ಇರಿಸಿ ರಸ್ತೆಯುದ್ದಕ್ಕೂ ಬೀಳದಂತೆ ವ್ಯವಸ್ಥೆ ಮಾಡಿತ್ತು. ಸಚಿನ್ ಭಿಡೆ, ನಾರಾಯಣ ಫಡಕೆ, ಶ್ರೀರಾಮ ಭಟ್,ಸ್ನೇಕ್ ಅನಿಲ್, ಅಣ್ಣಯ್ಯ ಮೊದಲಾದವರು ತಂಡದ ಹೊಣೆ ಹೊತ್ತು ಕೆಲಸ ಮಾಡಿದ್ದರು.
ರಸ್ತೆಯ ಇಕ್ಕೆಲಗಳ ಸ್ವಚ್ಛತೆ ಕಾರ್ಯ:
ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ನಿಡ್ಲೆ, ಬೂಡುಜಾಲು ಪ್ರದೇಶದಿಂದ ಗುಂಡ್ಯ ಗಡಿವರೆಗೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಿದ್ದು ರಸ್ತೆಯ ಎರಡು ಬದಿಗಳಲ್ಲಿ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಸಂಚರಿಸಲು ಕಷ್ಟವಾಗುವ ಕಾರಣ ಎರಡು ಕಡೆ ಸ್ವಚ್ಛತೆ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಅರಣ್ಯ ಇಲಾಖೆ ಜೊತೆಗೆ ಶೌರ್ಯ ವಿಪತ್ತು ತಂಡ ನಿಡ್ಲೆ, ನಿಸರ್ಗ ಯುವಜನೇತರ ಯುವಕ ಸಂಘ ಬರೆಂಗಾಯ, ಗ್ರಾಮಾಭಿವೃದ್ದಿ ಯೋಜನೆಯ ಸ್ವಯಂಸೇವಕರು, ವಿ ಎಫ್ ಸಿ ಸಂಘದ ಸದಸ್ಯರು, ಸ್ಥಳೀಯ ಸ್ವಯಂಸೇವಕರು, ಹಾಗೂ ಸ್ಥಳೀಯರು ಈ ಕಾರ್ಯಕ್ಕೆ ಸಾಥ್ ನೀಡಿದರು.
ಭಾಗವಹಿಸಿದ ಸಿಬ್ಬಂದಿಗಳು
ಡಿ ಎಫ್ ಒ ಡಾ.ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಸುಬ್ರಹ್ಮಣ್ಯ ರಾವ್ ಅವರ ನಿರ್ದೇಶನದಂತೆ ಆರ್ ಎಫ್ ಒ ತ್ಯಾಗರಾಜರವರ ಮೇಲ್ವಿಚಾರಣೆಯಲ್ಲಿ ಬೆಳ್ತಂಗಡಿ ಡಿ ಆರ್ ಎಫ್ ಒಗಳಾದ ರವೀಂದ್ರ ಅಂಕಲಗಿ, ಹರಿಪ್ರಸಾದ್, ರಾಜಶೇಖರ, ರಾಜೇಶ್, ಯತೀಂದ್ರ ಕುಮಾರ್, ಬಸಪ್ಪ ಹಲಗೇರ, ಬಂಟ್ವಾಳ ವಿಭಾಗದ ಯಶೋಧರ, ಪ್ರೀತಮ್, ಅನಿಲ್, ವಿನಯ ಗಸ್ತು ಪಾಲಕರಾದ ರಾಘವೇಂದ್ರ ಪ್ರಸಾದ್, ಪಾಂಡುರಂಗ ಕಮತಿ, ರವಿ ಮುಕ್ರಿ, ಸತೀಶ ಡಿಸೋಜ, ಪರಮೇಶ್ವರ್, ರವಿಕುಮಾರ್ ದಯಾನಂದ, ಅನಿತಾ, ಸ್ಮಿತಾ, ರೇಖಾ, ಜಿತೇಶ್, ಮನೋಜ್, ಶೋಭಿತ್, ಅರಣ್ಯ ವೀಕ್ಷಕರಾದ ಸದಾನಂದ, ಬಾಲಕೃಷ್ಣ, ವಾಸು ಪೂಜಾರಿ, ಪ್ರದೀಪ್, ರಾಜಾರಾಮ,ಗಫೂರ್, ಉಮೇಶ್ ನಾಯ್ಕ,
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ನೇತೃತ್ವದಲ್ಲಿ ಕೊಕ್ಕಡ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಕೆ ಆರ್ ಅಶೋಕ್, ಕಳೆಂಜ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ್, ನಿಡ್ಲೆ ಅರಣ್ಯ ವೀಕ್ಷಕ ದಾಮೋದರ್, ನಿಸರ್ಗ ಯುವಜನೇತರ ಯುವಕ ಮಂಡಲದ ಸದಸ್ಯ ಪುನೀತ್, ಶೌರ್ಯ ವಿಪತ್ತು ತಂಡದ ಗಿರೀಶ್ ಬಾರೆಗುಡ್ಡೆ, ಕೊರಪ್ಪ ಕೊರಗಪ್ಪ ಗೌಡ ಪರಹಿತ್ತಿಲು, ನಿಡ್ಲೆ ಗ್ರಾಮ ಪಂಚಾಯತಿ ಸಿಬ್ಬಂದಿ ಶ್ರೀನಿವಾಸ್, ಯುವ ಸಂಘದ ಸದಸ್ಯರು, ಶೌರ್ಯ ವಿಪತ್ತು ತಂಡದ ಸದಸ್ಯರು ವಿಶೇಷ ಸೇವೆ ಸಲ್ಲಿಸಿದರು