ನೆಲ್ಯಾಡಿ: ಕರ್ನಾಟಕ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀಮತಿ ಯಶೋಧರಮ್ಮ ದಾಸಪ್ಪ ಇವರ ಹೆಸರಿನಲ್ಲಿ ಸ್ತ್ರೀಶಕ್ತಿ ಯೋಜನೆಯಡಿ ರಚನೆಯಾಗಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸಬಲೀಕರಣ ಗೊಳ್ಳಲು ಗುಂಪಿನ ಸದಸ್ಯರು ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ. ಈ ನಿಟ್ಟಿನಲ್ಲಿ ಪ್ರತಿ ವರ್ಷವೂ ವಿಭಾಗಿಯ ಮಟ್ಟದಲ್ಲಿ ಉತ್ತಮ ಗುಂಪನ್ನು ಗುರುತಿಸಿ ರಾಜ್ಯಮಟ್ಟದಲ್ಲಿ ಪುರಸ್ಕರಿಸಲಾಗುತ್ತಿದೆ.
2022-23ನೇ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ನೆಲ್ಯಾಡಿ ಗ್ರಾಮದ ಸೌಜನ್ಯ ಸ್ತ್ರೀಶಕ್ತಿ ಸ್ವ ಸಹಾಯ ಗುಂಪಿಗೆ ರಾಜ್ಯಮಟ್ಟದ ಮೈಸೂರು ಕಂದಾಯ ವಿಭಾಗದ ಅತ್ಯುತ್ತಮ ಸ್ತ್ರೀಶಕ್ತಿ ಸಂಘ ಎಂದು ಗುರುತಿಸಿ ಸರಕಾರವು ಪ್ರಶಸ್ತಿಯನ್ನು ನೀಡಿದೆ.
ಈ ಸ್ತ್ರೀಶಕ್ತಿ ಸಂಘದಲ್ಲಿ ಹೇಮಲತಾ ಆರ್ ಶೆಟ್ಟಿ, ಶಾಂತಿ ಎ ಡಿಸೋಜಾ, ಪ್ರತಿಭಾ.ಟಿ ಶೆಟ್ಟಿ, ಭಾಗೀರಥಿ ಶೆಟ್ಟಿ, ಶಾಂತಮ್ಮ, ಕುಸುಮ ಭಂಡಾರಿ, ಯಶೋದ ಭಂಡಾರಿ, ಜೆಸ್ಸಿ, ಸುಶೀಲ ಭಂಡಾರಿ, ಶಾಂತಿ ಡಿಸೋಜಾ, ಲಕ್ಷ್ಮಿ ಕುಂಬಾರ, ಪೂವಕ್ಕ ಕುಶಾಲಪ್ಪ ಕುಂಬಾರ ಇವರನ್ನು ಒಳಗೊಂಡು ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟುಬೈಲು ಅಂಗನವಾಡಿ ಕೇಂದ್ರದಲ್ಲಿ ಸಂಘವು ಕಾರ್ಯಚರಿಸುತ್ತಿದ್ದು, ಸಂಘವು ಸಾಮಾಜಿಕ, ಆರ್ಥಿಕ, ಆಹಾರೋತ್ಪನ್ನ ಚಟುವಟಿಕೆ, ಉಳಿತಾಯ, ಆಂತರಿಕ ಸಾಲ, ಬ್ಯಾಂಕ್ ಸಾಲವನ್ನು ಕಾಲಕಾಲಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತಿದ್ದು. ಶ್ರಮದಾನ, ಬೀದಿ ನಾಟಕ, ಲಿಂಗ ತಾರತಮ್ಯ, ಮಧ್ಯಪಾನ ನಿಷೇಧ ಹಾಗೂ ಜಾಥಾ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಇದರ ನಿರ್ದೇಶಕರಾದ ಡಾ.ಅನುರಾಧ ಕೆ ಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಗಳೂರು ಇದರ ಸರಕಾರದ ಕಾರ್ಯದರ್ಶಿ ಡಾ.ಎನ್ ಮಂಜುಳಾ ಇವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನ ರವೀಂದ್ರ ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯಂದು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಕೊಲ್ಯೊಟ್ಟುಬೈಲು ಅಂಗನವಾಡಿ ಕಾರ್ಯಕರ್ತೆ ಸಂಪಾವತಿ ಪ್ರಶಸ್ತಿಯನ್ನು ಸ್ವೀಕರಿಸಿದರು.