5 & 8ನೇ ತರಗತಿ ‘ಬೋರ್ಡ್ ಪರೀಕ್ಷೆ’ ರದ್ದು; ಕರ್ನಾಟಕ ಹೈಕೋರ್ಟ್ ತೀರ್ಪು

ಶೇರ್ ಮಾಡಿ

5 ಮತ್ತು 8ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಪರೀಕ್ಷೆ ಪರಿಚಯಿಸುವುದಾಗಿ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಗಳನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ರಾಜ್ಯ ಪಠ್ಯಕ್ರಮದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅನ್ವಯಿಸಿ ಸುತ್ತೋಲೆಯನ್ನು ಹೊರಡಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ ರೂಪಿಸಲಿದೆ. ಈ ಸಂಬಂಧ ಹೊರಡಿಸಲಾಗಿರುವ ಸುತ್ತೋಲೆಗೆ ಹೈಕೋರ್ಟ್ ತಡೆ ನೀಡಿದೆ.

ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಸ್ಥೆ ಮತ್ತು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘದಿಂದ ಈ ಸುತ್ತೋಲೆಯನ್ನು ಪ್ರಶ್ನಿಸಲಾಗಿತ್ತು.

ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿ, ಸಾರ್ವಜನಿಕ ಶಿಕ್ಷಣ ಆಯುಕ್ತರು ಮತ್ತು ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿದ 12.12.2022, 13.12.2022 ಮತ್ತು 04.01.2023ರ ಸುತ್ತೋಲೆಗಳನ್ನು ರದ್ದುಗೊಳಿಸಿತು.

ಈ ಸುತ್ತೋಲೆಗಳು ಶಿಕ್ಷಣ ಹಕ್ಕು ಕಾಯ್ದೆಯ ಉದ್ದೇಶಗಳಿಗೆ ವಿರುದ್ಧವಾಗಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

“ಇಂತಹ ಸುತ್ತೋಲೆಗಳು ಕೇವಲ ಕಾಯಿದೆ ಅಥವಾ ನಿಯಮಗಳಿಗೆ ಪೂರಕವಾಗಬಹುದು. ಆದರೆ ಯಾವುದೇ ಸಂದರ್ಭದಲ್ಲಾದರೂ ನಿಯಮಗಳನ್ನು ಬದಲಿಸಲು ಸಾಧ್ಯವಿಲ್ಲ. ಇಂತಹ ಸುತ್ತೋಲೆಗಳನ್ನು ಹೊರಡಿಸಿದ ಸಂದರ್ಭಗಳಲ್ಲಿ ಕಾಯಿದೆಯ ಸೆಕ್ಷನ್ 38 (4) ಅಡಿಯಲ್ಲಿ ಪರಿಗಣಿಸಿದಂತೆ ನಿಗದಿತ ಕಾರ್ಯವಿಧಾನಗಳು ಮತ್ತು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಸುತ್ತೋಲೆಗಳನ್ನು ರದ್ದುಗೊಳಿಸಿದ ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಮೌಲ್ಯಮಾಪನ ವಿಧಾನವು ಹೊಸ ಸ್ವರೂಪವಾಗಿದೆ” ಎಂದಿದ್ದು, “ರಿಟ್ ಅರ್ಜಿಗಳನ್ನು ಅನುಮತಿಸಿದೆ”.

“ರಾಜ್ಯ ಸರ್ಕಾರವು ಕಾರ್ಯವಿಧಾನವನ್ನು ಅನುಸರಿಸಿಲ್ಲ. ಸುತ್ತೋಲೆಗಳನ್ನು ಹೊರಡಿಸುವ ಮೊದಲು ರಾಜ್ಯ ಶಾಸಕಾಂಗಗಳ ಮುಂದೆ ಸಮಸ್ಯೆಯನ್ನು ಚರ್ಚಿಸಿಲ್ಲ” ಎಂದು ಹೈಕೋರ್ಟ್ ಹೇಳಿದೆ.

“ರಾಜ್ಯ ಸರ್ಕಾರವು ಆರ್‌ಟಿಇ ಕಾಯಿದೆಯ ಅಡಿಯಲ್ಲಿ ಕೆಲವು ಮೌಲ್ಯಮಾಪನ ಕಾರ್ಯವಿಧಾನಗಳನ್ನು ಸೂಚಿಸಲು ಸುತ್ತೋಲೆಯನ್ನು ಹೊರಡಿಸಿದೆ. ನಿಯಮಗಳು ಮತ್ತು ನಿಬಂಧನೆಗಳನ್ನು ಮಾಡಲು, ಕಾಯಿದೆಯ ನಿಬಂಧನೆಗಳನ್ವಯ ಕ್ರಮ ಕೈಗೊಳ್ಳುವ ಸರ್ಕಾರ ಅಧಿಕಾರವನ್ನು ಹೊಂದಿದೆ. ಹಾಗೆ ಮಾಡುವಾಗ ಅದು ಅಗತ್ಯವಾಗಿ ಕಾಯಿದೆಯ ಅಡಿಯಲ್ಲಿ ಕಾರ್ಯವಿಧಾನವನ್ನು ಅನುಸರಿಸಬೇಕು. ಕಾಯಿದೆಯ ಸೆಕ್ಷನ್ 38(4)ರ ಪ್ರಕಾರ ನಿಯಮ ಅಥವಾ ಅಧಿಸೂಚನೆಯನ್ನು ರಾಜ್ಯ ಶಾಸಕಾಂಗಗಳ ಮುಂದೆ ಮಂಡಿಸಿದ ನಂತರ ಹೊರಡಿಸಬೇಕು” ಎಂದು ಕೋರ್ಟ್ ಗಮನಿಸಿದೆ.

ರಾಜ್ಯ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್, “ಸರ್ಕಾರವು ಯಾವುದೇ ನಿಯಮ ಅಥವಾ ಅಧಿಸೂಚನೆಯನ್ನು ಹೊರಡಿಸುತ್ತಿಲ್ಲ. ರಾಜ್ಯ ಪಠ್ಯಕ್ರಮದ ಅಡಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕೆಲವು ಮೌಲ್ಯಮಾಪನಗಳನ್ನು ಮಾತ್ರ ರೂಪಿಸುತ್ತಿದೆ. ಆದ್ದರಿಂದ ಕಾಯಿದೆಯ ಪ್ರಕ್ರಿಯೆ ಮತ್ತು ಕಾರ್ಯವಿಧಾನವನ್ನು ಅನುಸರಿಸುವ ಪ್ರಶ್ನೆಯೇ ಬರುವುದಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ ಸೆಕ್ಷನ್ 38 ಅಥವಾ ಕಾಯಿದೆಯ ಯಾವುದೇ ಇತರ ನಿಬಂಧನೆಗಳು ಇದಕ್ಕೆ ಅನ್ವಯಿಸುವುದಿಲ್ಲ” ಎಂದು ವಾದಿಸಿದರು.

ಆದಾಗ್ಯೂ, ಅಂತಹ ವಾದಗಳು ದೋಷಪೂರಿತವಾಗಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಆದರೆ ಸುತ್ತೋಲೆಗಳ ಹಿಂದಿನ ಉದ್ದೇಶವನ್ನು ತೀರ್ಪಿನಲ್ಲಿ ಶ್ಲಾಘಿಸಲಾಗಿದೆ. “ರಾಜ್ಯ ಸರ್ಕಾರದ ಆದೇಶದ ಉದ್ದೇಶವು ಶ್ಲಾಘನೀಯ. ರಾಜ್ಯದ ಮೂಲೆ ಮೂಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವಾಗ, ಒಂದನೇ ತರಗತಿಯಿಂದ 9 ನೇ ತರಗತಿಯವರೆಗೆ ಶಾಲಾ ಮಕ್ಕಳ ಮೌಲ್ಯಮಾಪನ ಕಾರ್ಯವಿಧಾನವನ್ನು ತರುವುದು ಅವಶ್ಯಕ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ ರೀತಿ ಅನುಚಿತವಾಗಿ ಕಂಡು ಬಂದಿದೆ” ಎಂದು ತಿಳಿಸಿದೆ.

Leave a Reply

error: Content is protected !!