ಮಂಗಳೂರು: ಆನ್‌ಲೈನ್ ಮೂಲಕ ಹಣ ದ್ವಿಗುಣಗೊಳಿಸುವ ಆಮಿಷ ತೋರಿಸಿ ವ್ಯಕ್ತಿಯೋರ್ವರಿಗೆ 15.34 ಲ.ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೋರ್ವರ ವಾಟ್ಸ್ ಆ್ಯಪ್‌ಗೆ ಮಾ. 4ರಂದು ಅಪರಿಚಿತ ವ್ಯಕ್ತಿ 9710449035 ಮೊಬೈಲ್ ನಂಬರ್‌ನಿಂದ ಪಾರ್ಟ್ ಟೈಂ ಉದ್ಯೋಗದ ಬಗ್ಗೆ ಸಂದೇಶ ಕಳುಹಿಸಿದ್ದ. ಆ ಸಂದೇಶ ಗೂಗಲ್‌ಗೆ ಲಿಂಕ್ ಆಗಿತ್ತು. ಜಾಬ್‌ನ ರೇಟಿಂಗ್ ಕೂಡ ಇತ್ತು. ಅಪರಿಚಿತ ವ್ಯಕ್ತಿಯು ಟೆಲಿಗ್ರಾಂ ಆ್ಯಪ್ ಅನ್ನು ಡೌನ್‌ಲೋಡ್ ಮಾಡಲು ತಿಳಿಸಿದ್ದು ಅದರಂತೆ ದೂರುದಾರ ವ್ಯಕ್ತಿ (ಮೋಸ ಹೋದವರು) ಟೆಲಿಗ್ರಾಂ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಅದರಲ್ಲಿ ಆನ್‌ಲೈನ್ ಮೂಲಕ ಹಣ ದ್ವಿಗುಣ ಮಾಡಲು 3 ಟಾಸ್ಕ್ ಮಾಡಲು ತಿಳಿಸಲಾಗಿತ್ತು.
ಆರಂಭದಲ್ಲಿ 150 ರೂ. ಹಾಕಲು, ಅನಂತರ 200 ರೂ. ಹಾಕಲು ಅಪರಿಚಿತ ವ್ಯಕ್ತಿ ತಿಳಿಸಿದ್ದಾನೆ. ಅದರಂತೆ ದೂರುದಾರರು ಹಣ ಹಾಕಿದ್ದು ಅವರಿಗೆ 2,800 ರೂ. ವಾಪಸ್ ಬಂದಿತ್ತು. ಹಣ ವಾಪಸ್ ಬರುತ್ತದೆ ಎಂದು ನಂಬಿದ ದೂರುದಾರ ವ್ಯಕ್ತಿ ಅಪರಿಚಿತ ವ್ಯಕ್ತಿ ನೀಡಿದ ಸಂದೇಶದಂತೆ ಮುಂದುವರಿದರು. ಅಪರಿಚಿತ ವ್ಯಕ್ತಿ ಕಳುಹಿಸಿದ ಲಿಂಕ್ ಅನ್ನು ಒತ್ತಿದರು. ಖಾತೆಯನ್ನು ಕ್ರಿಯೇಟ್ ಮಾಡಿ ಪಾಸ್‌ವರ್ಡ್ ನಮೂದಿಸಿದರು. ಅನಂತರ ಅಪರಿಚಿತ ವ್ಯಕ್ತಿ 2,800 ರೂ. ಕಳುಹಿಸುವಂತೆ ತಿಳಿಸಿದ್ದು ಅದನ್ನು ಕೂಡ ದೂರುದಾರರು ಪಾವತಿಸಿದ್ದಾರೆ. ಬಳಿಕ 9,000 ರೂ. ಕಳುಹಿಸಿದ್ದಾರೆ. ಇದೇ ರೀತಿ ಟಾಸ್ಕ್ ಮುಂದುವರೆಸಲು 25,000 ರೂ. ಹಾಕುವಂತೆ ತಿಳಿಸಿದ್ದು ಅದನ್ನು ಕೂಡ ದೂರುದಾರರು ಪಾವತಿಸಿದ್ದರು. ಹೀಗೆ ಅಪರಿಚಿತ ವ್ಯಕ್ತಿ ದೂರುದಾರರಿಂದ ಮಾ. 4ರಿಂದ ಮಾ. 8ರ ವರೆಗೆ ಹಂತ ಹಂತವಾಗಿ ಒಟ್ಟು 15,34,000 ರೂ. ವರ್ಗಾಯಿಸಿಕೊಂಡಿದ್ದಾನೆ. ಆದರೆ ಅವರಿಗೆ ಹಣ ವಾಪಸ್ ಬಂದಿಲ್ಲ ಎಂದು ದೂರು ದಾಖಲಾಗಿದೆ.