5,8ನೇ ತರಗತಿ ಪಬ್ಲಿಕ್ ಪರೀಕ್ಷೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್.. ಮಾರ್ಚ್ 27 ರಿಂದ ಪರೀಕ್ಷೆ ಆರಂಭ

ಶೇರ್ ಮಾಡಿ

2022-23ನೇ ಸಾಲಿನಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಮೌಲ್ಯಾಂಕನ(ಬೋರ್ಡ್‌) ಪರೀಕ್ಷೆಗಳನ್ನು ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ ಆದೇಶಕ್ಕೆ ತಡೆ ನೀಡಿದೆ.

5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಷರತ್ತು ಬದ್ಧ ಅನುಮತಿ ನೀಡಿದೆ. ಈ ಮೂಲಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದು, ಯಾವುದೇ ವಿದ್ಯಾರ್ಥಿಯನ್ನು ಫೇಲ್ ಮಾಡುವಂತಿಲ್ಲ ಎಂದು ಆದೇಶಿಸಿದೆ.

ಹೈಕೋರ್ಟ್ ವಿಭಾಗೀಯ ಪೀಠ ಷರತ್ತುಬದ್ಧ ಅನುಮತಿ ನೀಡಿದ್ದು, 5 ಮತ್ತು 8ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಮಾರ್ಚ್ 27 ರಿಂದ ನಡೆಸಲು ಸೂಚಿಸಿದೆ.

ಬೋರ್ಡ್‌ ಪರೀಕ್ಷೆ ನಡೆಸುವ ಸಂಬಂಧ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಶುಕ್ರವಾರ ನೀಡಿದ್ದ ತೀರ್ಪು ಪ್ರಶ್ನಿಸಿ ಸರ್ಕಾರ ಶನಿವಾರವೇ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್‌. ಕಿಣಗಿ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು.

ಸರ್ಕಾರ ಹಾಗೂ ಪ್ರತಿವಾದಿಗಳ ಪರ ವಕೀಲರ ಸುದೀರ್ಘ ವಾದ- ಪ್ರತಿವಾದ ಆಲಿಸಿದ ಪೀಠ, ಮಾ. 13 ರಿಂದ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತಲ್ಲದೆ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕೆಂಬ ಸರ್ಕಾರದ ಮಧ್ಯಂತರ ಮನವಿಯ ವಿಚಾರಣೆಯನ್ನು ಮಾ.14 ಕ್ಕೆ ಮೂಂದೂಡಿತು. ಅಲ್ಲದೆ, ಉದ್ದೇಶಿತ ಪರೀಕ್ಷೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸುವಂತೆಯೂ ಹೈಕೋರ್ಟ್ ಸೂಚನೆ ನೀಡಿತ್ತು.

Leave a Reply

error: Content is protected !!