ಪುತ್ತೂರು: ಪಂಚಾಯತ್ ನ ಓವರ್ ಹೆಡ್ ನೀರಿನ ಟ್ಯಾಂಕ್ ಒಳಗೆ ಯುವಕನೋರ್ವ ಮೃತದೇಹ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.
ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ತೋಟದಮೂಲೆ ಎಂಬಲ್ಲಿನ ನಿವಾಸಿ ಚೆನ್ನಪ್ಪ ಎಂಬವರ ಪುತ್ರ ಕೂಲಿ ಕಾರ್ಮಿಕ ದಿನೇಶ್ (18) ಮೃತಪಟ್ಟ ಯುವಕ. ದಿನೇಶ್ ರಿಗೆ ಮದ್ಯಪಾನದ ಚಟವಿತ್ತು ಎನ್ನಲಾಗಿದ್ದು, ಮೂರು ದಿನಗಳ ಹಿಂದೆ ಇವರು ಮನೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಇಲ್ಲಿನ ಪಂಚಾಯತ್ ನೀರು ಸರಬರಾಜಿನ ಓವರ್ ಹೆಡ್ ಟ್ಯಾಂಕ್ ನಲ್ಲಿ ಪತ್ತೆಯಾಗಿದೆ.
ವಿದ್ಯುತ್ ಸಮಸ್ಯೆಯ ಕಾರಣದಿಂದಾಗಿ ಕಳೆದ ಮೂರು ದಿನಗಳಿಂದ ಈ ಓವರ್ ಹೆಡ್ ಟ್ಯಾಂಕ್ ನಲ್ಲಿ ನೀರು ತುಂಬಿಸಿರಲಿಲ್ಲ. ಸೋಮವಾರ ವಿದ್ಯುತ್ ಸಮಸ್ಯೆ ಸರಿಪಡಿಸಲಾಗಿತ್ತು. ಬಳಿಕ ಟ್ಯಾಂಕ್ ಗೆ ನೀರು ತುಂಬಿಸಲಾಗಿತ್ತು. ಮಂಗಳವಾರ ನೀರು ಬಿಡುವಾತ ನೀರು ತುಂಬಿರುವ ಬಗ್ಗೆ ಟ್ಯಾಂಕ್ ಗೆ ಹತ್ತಿ ಪರಿಶೀಲನೆ ನಡೆಸುತ್ತಿದ್ದಾಗ ಮೃತದೇಹ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.