ಬೆಳ್ತಂಗಡಿ: ಎ.9ರ ರಾತ್ರಿ ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ಕಾರೊಂದು ಕಂದಕಕ್ಕೆ ಉರುಳಿ ಬಿದ್ದು ಅಪಘಾತ ದಲ್ಲಿ ಗಂಭೀರ ಗಾಯಗೊಂಡಿದ್ದವರ ಪೈಕಿ ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತಪಟ್ಟವರು ಸರೋಜಿನಿ ಶೆಟ್ಟಿ ಎಂದು ಗುರುತಿಸಲಾಗಿದೆ. ಉಳಿದಂತೆ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಪುತ್ರಿ ಪೂರ್ಣಿಮಾ ಶೆಟ್ಟಿ, ಮೊಮ್ಮಗ ಸಮೃದ್ಧ್ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸರೋಜಿನಿ ಶೆಟ್ಟಿಯವರು ಪುಷ್ಪಾವತಿಯ ಸಂಬಂಧಿ. ಕೊಪ್ಪದಲ್ಲಿ ನಿಧನರಾದ ಸಂಬಂಧಿಕರ ಮನೆಗೆ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಹಾಗೂ ಕುಟುಂಬಸ್ಥರು ಕಾರಿನಲ್ಲಿ ಭೇಟಿ ನೀಡಿ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕೊಟ್ಟಿಗೆ ಹಾರದಿಂದ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಕಾರು ರವಿವಾರ ರಾತ್ರಿ ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ, ಸುಮಾರು 100 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸರೋಜಿನಿ ಶೆಟ್ಟಿಯವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.