ಉಪ್ಪಿನಂಗಡಿ: ಜಿಲ್ಲೆಯ ಜೀವ ನದಿಯಾಗಿರುವ ನೇತ್ರಾವತಿಯು ಉಪ್ಪಿನಂಗಡಿಯಲ್ಲಿ ಬಿಸಿಲ ಝಳಕ್ಕೆ ತನ್ನ ಹರಿವನ್ನು ಕಡಿದುಕೊಂಡಿದ್ದು, ಇತ್ತೀಚೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಎರಡನೇ ಬಾರಿ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂರು ವರ್ಷಗಳ ಹಿಂದೆ ಇದೇ ರೀತಿ ನೀರಿನ ಹರಿವು ಕಡಿದುಕೊಂಡಿತ್ತು. ಸನಿಹದಲ್ಲೇ ಕುಮಾರಧಾರಾ ನದಿ ಸಂಗಮಿಸಿದ ಬಳಿಕ ನೇತ್ರಾವತಿ ಮತ್ತೆ ಹರಿಯುತ್ತಾಳಾದರೂ ಕುಮಾರಧಾರಾ ಸಂಗಮಿಸುವ ಮುನ್ನವೇ ನೇತ್ರಾವತಿ ನದಿಯ ನೀರು ಬತ್ತಿ ಹೋಗಿ ನದಿ ಬರಡಾಗಿದೆ.
ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಬಹುತೇಕ ಶ್ರದ್ಧಾಳುಗಳು ಬಂಧುಗಳ ಅಸ್ಥಿ ವಿಸರ್ಜನೆ ಮಾಡಿ ಪಿಂಡ ಪ್ರದಾನಾದಿ ಕಾರ್ಯಗಳನ್ನು ನೆರವೇರಿಸಿದ ಬಳಿಕ ನದಿಯಲ್ಲಿ ಪುಣ್ಯ ಸ್ನಾನ ಮಾಡುವುದು ವಾಡಿಕೆ. ನದಿ ಬತ್ತಿ ಹೋದ ಕಾರಣಕ್ಕೆ ಪುಣ್ಯ ತೀರ್ಥ ಸ್ನಾನಕ್ಕೆ ಅಡಚಣೆಯಾಗಿದೆ. ಕುಮಾರಧಾರಾ ಸಂಗಮಿಸಿದ ಬಳಿಕ ಸ್ನಾನ ಮಾಡುವ ಅವಕಾಶವಿದೆಯಾದರೂ ಸದ್ರಿ ಸ್ಥಳವು ಅಪಾಯಕಾರಿಯಾಗಿರುವುದರಿಂದ ಭಕ್ತರ ಅನುಕೂಲತೆಗಾಗಿ ಸಂಗಮ ಸ್ಥಳದಲ್ಲಿ ಮರಳು ತೆಗೆದು ಹೊಂಡ ಮಾಡಿ ಅಲ್ಲಿ ನೀರು ನಿಲ್ಲುವಂತೆ ತಾತ್ಕಾಲಿಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.