ಸುಳ್ಯ: ಸುಳ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಂದ ಕುಮಾರ್ ಅವರಿಗೆ ಬಿ ಫಾರಂ ನೀಡದೆ ಇದ್ದಲ್ಲಿ ಅಥವಾ ಕಾಂಗ್ರೆಸ್ ನಾಯಕರು ನಂದಕುಮಾರ್ ಅಭಿಮಾನಿಗಳು ಸಲ್ಲಿಸಿರುವ ಬೇಡಿಕೆಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡದೆ ಇದ್ದಲ್ಲಿ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸಲಾಗುವುದು ಎಂದು ಅವರ ಅಭಿಮಾನಿಗಳು ನಿರ್ಧಾರ ಕೈಗೊಂಡಿದ್ದಾರೆ.
ರವಿವಾರ ನಿಂತಿಕಲ್ಲಿನಲ್ಲಿ ನಡೆದ ನಂದಕುಮಾರ್ ಅಭಿಮಾನಿ ಬಳಗದ ಸಮಾವೇಶದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಬಿ ಫಾರಂ ಕೊಡುವ ಮೊದಲು ಅಭ್ಯರ್ಥಿ ಬದಲಾಯಿಸಿ ನಂದಕುಮಾರ್ ಅವರಿಗೆ ನೀಡಬೇಕು. ಒಂದೇ ವೇಳೆ ಬೇಡಿಕೆ ಈಡೇರಿಸದಿದ್ದರೆ ನಂದಕುಮಾರ್ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸುವಂತೆ ಸಮಾವೇಶದಲ್ಲಿದ್ದ ಕಾರ್ಯಕರ್ತರು ಒಕ್ಕೊರಲಿನಿಂದ ಚಪ್ಪಾಳೆ ತಟ್ಟಿ, ಘೋಷಣೆ ಕೂಗಿ ಆಗ್ರಹಿಸಿದರು.
ಕಾಂಗ್ರೆಸ್‌ನಿಂದ ಈಗಾಗಲೇ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಜಿ. ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಮಧ್ಯೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಕಡಬದಲ್ಲಿ ಪತ್ರಕರ್ತರ ಜತೆ ಮಾತನಾಡಿ, ಸಮಸ್ಯೆ ಯನ್ನು ಬಗೆಹರಿಸಲಾಗುತ್ತಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಂದಕುಮಾರ್ ಜತೆ ಮಾತನಾಡಿದ್ದಾರೆ. ಟಿಕೆಟ್ ಕುರಿತಾಗಿ ಗೊಂದಲ ಇಲ್ಲ ಎಂದಿದ್ದಾರೆ.