ನೆಲ್ಯಾಡಿ: ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಡೈನೇಜ್‌ಗೆ ಬಿದ್ದು ವೃದ್ಧರೋರ್ವರು ತೀವ್ರವಾದ ಗಾಯಗೊಂಡಿರುವ ಘಟನೆ ನೆಲ್ಯಾಡಿಯಲ್ಲಿ ಎ.10ರಂದು ಮಧ್ಯಾಹ್ನ ನಡೆದಿದೆ.
ನೆಲ್ಯಾಡಿ ಗ್ರಾಮದ ಕುರುಬರಕೇರಿ ನಿವಾಸಿ ಬಾಬು(65ವ.) ಗಾಯಗೊಂಡವರು. ನೆಲ್ಯಾಡಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಪೇಟೆಯ ಎರಡೂ ಬದಿಯೂ ಇರುವ ಡ್ರೈನೇಜ್‌ಗೆ ಕಾಂಕ್ರಿಟ್ ತಡೆಗೋಡೆ ಮಾಡಿ ಕಾಂಕ್ರಿಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ. ಆದರೆ ಅಲ್ಲಲ್ಲಿ ಮಧ್ಯದಲ್ಲಿ ಡ್ರೈನೇಜ್ ಮುಚ್ಚದೇ ಓಪನ್ ಬಿಡಲಾಗಿದೆ.
ಬಾಬು ಅವರು ಡ್ರೈನೇಜ್ ಸ್ಲ್ಯಾಬ್ ಮೇಲೆ ನಡೆದುಕೊಂಡು ಬಂದವರು ನೆಲ್ಯಾಡಿ ಸೂರ್ಯ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಕಾಮಗಾರಿಯ ಗುತ್ತಿಗೆದಾರರು ಅಗಲವಾದ ಗುಂಡಿ ನಿರ್ಮಿಸಿ ಸ್ಲ್ಯಾಬ್ ಅಳವಡಿಸದೇ ಇರುವುದು ಅರಿವಿಗೆ ಬಾರದೇ ಆಕಸ್ಮಿಕವಾಗಿ ಡ್ರೈನೇಜ್ ಒಳಕ್ಕೆ ಬಿದ್ದಿದ್ದಾರೆ. ಸುಮಾರು ನಾಲ್ಕೈದು ಅಡಿ ಆಳ ಇರುವ ಈ ಗುಂಡಿಗೆ ಬಿದ್ದಿದ್ದ ಬಾಬು ಅವರನ್ನು ಸ್ಥಳೀಯರು ಮೇಲಕ್ಕೆತ್ತಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಬಾಬು ಅವರ ತಲೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರವಾದ ಗಾಯವಾಗಿದೆ ಎಂದು ವರದಿಯಾಗಿದೆ. ಎರಡು ದಿನದ ಹಿಂದೆ ಇದೆ ಹೊಂಡಕ್ಕೆ ಇನ್ನೊಬ್ಬರು ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿ:
ರಾಷ್ಟ್ರೀಯ ಹೆದ್ದಾರಿ ಚತುಷ್ಟ ರಸ್ತೆಯ ಬದಿಗಳಲ್ಲಿ ಡ್ರೈನೇಜ್ ಗಳನ್ನು ನಿರ್ಮಿಸಿದ್ದು. ಡ್ರೈನೇಜ್ ಗಳ ಮೇಲೆ ಅಲ್ಲಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಗಳನ್ನು ಅಳವಡಿಸದೆ ಹಾಗೆ ಬಿಟ್ಟಿರುತ್ತಾರೆ. ನಿರ್ಮಿಸಿದ ಡ್ರೈನೇಜ್ ಗಳ ಒಳಗಡೆ ಕಾಮಗಾರಿಗೆ ಉಪಯೋಗಿಸಿದ ಸಿಮೆಂಟ್ ನ ರಾಶಿಗಳು, ಉಪಯೋಗಿಸಿದ ಮರಮುಟ್ಟುಗಳನ್ನು ತೆರೆವುಗೊಳಿಸದೆ ಅಲ್ಲಲ್ಲಿ ಡ್ರೈನೇಜ್ ನ ಒಳಗಡೆ ಹಾಕಿರುವುದು ಕಂಡು ಬರುತ್ತಿದೆ. ಇದರಿಂದಾಗಿ
ಮಳೆಗಾಲದಲ್ಲಿ ನೀರು ಹರಿವಿಗೆ ತೊಡಕಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಅಲ್ಲದೆ ಸರ್ವಿಸ್ ರಸ್ತೆಯ ಬದಿಯಲ್ಲಿ ನಿರ್ಮಿಸಿದ ಡ್ರೈನೇಜ್ ರಸ್ತೆಯಿಂದ ಎರಡರಿಂದ ಮೂರು ಫೀಟು ಎತ್ತರವಾಗಿದ್ದು ಮಹಿಳೆಯರಿಗೆ, ಮಕ್ಕಳಿಗೆ, ವಯಸ್ಕರಿಗೆ ಓಡಾಡಲು ಸಾಧ್ಯವಾಗದಂತಾಗಿದೆ. ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸರ್ವಿಸ್ ರಸ್ತೆಯಲ್ಲಿಯೇ ವಾಹನ ಪಾರ್ಕಿಂಗ್ ಮಾಡುವಂತಾಗಿದೆ.
ಸೊಳ್ಳೆಗಳ ಕಾಟ:
ನೆಲ್ಯಾಡಿ ಪೇಟೆಯಲ್ಲಿನ ಚರಂಡಿಯ ಎರಡೂ ಬದಿ ಕಾಂಕ್ರಿಟ್ ತಡೆಗೋಡೆ ಮಾಡಿ ಮೇಲ್ಬಾಗವನ್ನು ಅಲ್ಲಲ್ಲಿ ಸ್ಲ್ಯಾಬ್‌ನಿಂದ ಮುಚ್ಚದೇ ಚರಂಡಿಯನ್ನು ಓಪನ್ ಬಿಡಲಾಗಿದೆ. ಚರಂಡಿಯಲ್ಲಿ ಹರಿದು ಬರುವ ಕೊಳಚೆ ನೀರು, ಕಸದ ರಾಶಿಗಳು ಅಲ್ಲಲ್ಲಿ ನಿಂತಿದ್ದು ಸೊಳ್ಳೆಗಳ ಕಾಟವೂ ವಿಪರೀತವಾಗಿದೆ. ದುರ್ವಾಸನೆಯೂ ಬರುತ್ತಿರುವುದರಿಂದ ವರ್ತಕರು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ದೂರು ವ್ಯಕ್ತಗೊಂಡಿದೆ.
ಸಾರ್ವಜನಿಕರ ಅಳಲು:
ಗುತ್ತಿಗೆ ಪಡೆದ ಅಧಿಕಾರಿಗಳಲ್ಲಿ ವರ್ತಕರು, ಸಾರ್ವಜನಿಕರು ಸಮಸ್ಯೆಗಳನ್ನು ವ್ಯಕ್ತಪಡಿಸಿದ್ದಲ್ಲಿ, ಕಾಮಗಾರಿಯನ್ನು ಸ್ಥಗಿತಗೊಳಿಸಿ ಕೊನೆಗೆ ಕಾಮಗಾರಿಯನ್ನು ಮಾಡುತ್ತೇವೆ ಎಂಬ ಬೆದರಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಕೂಡ ವ್ಯಕ್ತವಾಗುತ್ತಿದೆ.
ಇನ್ನಾದರೂ ಗುತ್ತಿಗೆದಾರರು ಮಳೆಗಾಲ ಆರಂಭವಾಗುವ ಮೊದಲೇ ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳನ್ನು ಮನಗಂಡು ಬಗ್ಗೆ ಹರಿಸಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.