ನೆಲ್ಯಾಡಿ: ನಿರಂತರ ಯೋಗ ತರಬೇತಿ ಕೇಂದ್ರ ಸುಳ್ಯ ಇದರ ವತಿಯಿಂದ ಯೋಗ ಶಿಕ್ಷಕ ಶರತ್ ಮೆರ್ಗಿನಡ್ಕ ಇವರ ಮಾರ್ಗದರ್ಶನದಲ್ಲಿ ಯೋಗ ತರಬೇತಿ ಕೇಂದ್ರ ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಶಬರೀಶ ಕಲಾಮಂದಿರದಲ್ಲಿ ಉದ್ಘಾಟನೆಗೊಂಡಿತ್ತು.
ಯೋಗ ತರಬೇತಿ ಶಿಬಿರವನ್ನು ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಸದಾನಂದ ಕುಂದರ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಯೋಗಭ್ಯಾಸ ನಮ್ಮ ಜೀವನದಲ್ಲಿ ಅತಿ ಅವಶ್ಯಕವಾಗಿದೆ ಕಠಿಣವಾದ ಯೋಗಭ್ಯಾಸದ ಮೂಲಕ ಮಾನಸಿಕ ನೆಮ್ಮದಿ, ಏಕಾಗ್ರತೆ, ತಾಳ್ಮೆ, ಸಂಯಮವನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬಹುದು, ಯೋಗದ ಮೂಲಕ ಮನಸ್ಸನ್ನು ಸ್ಥಿರತೆಯಲ್ಲಿ ಕಾಪಾಡಬಹುದು. ಮಕ್ಕಳಲ್ಲಿ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಬಹುದು. ಶ್ರೀ ದೇವರ ಸನ್ನಿಧಿಯಲ್ಲಿ ಆರಂಭಗೊಂಡ ಈ ತರಬೇತಿ ಕೇಂದ್ರವು ಎಲ್ಲರಿಗೂ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನೆಲ್ಯಾಡಿ ಸೇವಾ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನೆಲ್ಯಾಡಿ ಜೇಸಿಐ ಅಧ್ಯಕ್ಷರಾದ ದಯಾಕರ ರೈ ಮಾತನಾಡಿ ನಾವು ಸೇವಿಸುವಂತಹ ಆಹಾರ, ಗಾಳಿ, ನೀರು ಎಲ್ಲವೂ ಕಲುಷಿತವಾದ ಕಾಲಘಟ್ಟದಲ್ಲಿ ನಮ್ಮ ಆರೋಗ್ಯವನ್ನು ನಮ್ಮ ಅಂಗೈಯಲ್ಲಿ ಇಟ್ಟುಕೊಳ್ಳಬೇಕಾದರೆ ನಿರಂತರ ಯೋಗ ಅತಿ ಅವಶ್ಯಕ ಮತ್ತು ಅನಿವಾರ್ಯವಾಗಿದೆ. ಪಂಚೇಂದ್ರಿಯಗಳನ್ನು ಸೀಮಿತದಲ್ಲಿ ಇಟ್ಟುಕೊಂಡು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗ ನಮ್ಮೆಲ್ಲರ ಪಾಲಿಗೆ ಅಗತ್ಯವಾಗಿದೆ ಎಂದರು.
ಪ್ರಗತಿ ವಿದ್ಯಾಸಂಸ್ಥೆಯದ ಯೋಗ ಶಿಕ್ಷಕರು, ನಿರಂತರ ಯೋಗ ಕಲಿಕಾ ಕೇಂದ್ರದ ಮಾರ್ಗದರ್ಶಕರು ಆದ ಶರತ್ ಮೆರ್ಗಿನಡ್ಕ ಅವರು ಮಾತನಾಡಿ ಪ್ರತಿ ಆದಿತ್ಯವಾರ ಸಂಜೆ ನಾಲ್ಕರಿಂದ ಐದು ಮೂವತ್ತರವರೆಗೆ ಯೋಗ ತರಬೇತಿ ನೆಲ್ಯಾಡಿ ಯಲ್ಲಿ ನಡೆಯುತ್ತದೆ ಇದರ ಬಗ್ಗೆ ಮಾಹಿತಿಯನ್ನು ವಾಟ್ಸಾಪ್ ಸಂದೇಶಗಳ ಮೂಲಕ ಸಾರ್ವಜನಿಕರು ತಿಳಿದುಕೊಳ್ಳಬಹುದು, ವಯಸ್ಸಿನ ಮಿತಿ ಇಲ್ಲದೆ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಯೋಗ ತರಬೇತಿಯಲ್ಲಿ ಪಾಲ್ಗೊಳ್ಳಬಹುದು, ಯೋಗದ ಮೂಲಕ ಸರಕಾರದಿಂದ ಸಿಗುವ ವಿಶೇಷ ಸೌಲಭ್ಯವನ್ನು ಮಕ್ಕಳು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ನಿವೃತ್ತ ಮುಖ್ಯಗುರು ಯೋಗ ಶಿಕ್ಷಕರು ಆದ ಆರ್ ವೆಂಕಟರಮಣ ಭಟ್ ರವರು ಮಾತನಾಡಿ ಯೋಗ ಪ್ರಾಚೀನ ಪರಂಪರೆಯನ್ನು ಹೊಂದಿದೆ ವೇದಗಳ ಕಾಲದಿಂದ ರಿಷಿ ಮುನಿಗಳಿಂದ ಪ್ರಣಿತವಾದ ಯೋಗ ನಮ್ಮ ಬದುಕಿಗೆ ಸಾರ್ಥಕವನ್ನು ತಂದುಕೊಡುತ್ತದೆ, ಯೋಗದ ಅನುಷ್ಠಾನ ಅನೇಕ ಪ್ರಕಾರಗಳಿಂದ ಕೂಡಿದೆ, ಯೋಗವು ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನು ದೂರ ಮಾಡಿ ಧನಾತ್ಮಕ, ಸಾತ್ವಿಕ ಅಂಶಗಳನ್ನು ಸ್ಥಿರವಾಗಿಸಿ ಮನಸ್ಸನ್ನು ಹತೋಟಿಯಲ್ಲಿ ಇಡಲು ಪೂರಕವಾಗುತ್ತದೆ. ಯೋಗದ ಮೂಲಕ ಆರೋಗ್ಯ, ಪೂರ್ಣ ಸಮಾಜ ನಿರ್ಮಾಣವಾಗುತ್ತದೆ, ಯೋಗ ಕೇಂದ್ರ ಎಲ್ಲರಿಗೂ ಆರೋಗ್ಯದ ದಾರಿ ದೀಪವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ನೆಲ್ಯಾಡಿ ವಲಯ್ಯಾಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್ ಮತ್ತು ಶ್ರೀರಾಮ ವಿದ್ಯಾಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ರವಿಚಂದ್ರ ಹೊಸವಕ್ಲು ರವರು ಶುಭ ಹಾರೈಸಿದರು.
ನಿರಂತರ ಯೋಗ ಕೇಂದ್ರದ ಯೋಗ ಗುರು, ಯೋಗ ಸ್ಪರ್ಧೆಗಳಲ್ಲಿ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದ ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದ ಮಕ್ಕಳಿಗೆ ವಿಶೇಷ ಮಾರ್ಗದರ್ಶನ ನೀಡಿದ ಯೋಗ ಗುರುಗಳಾದ ಶರತ್ ಮೆರ್ಗಿನಡ್ಕ ಅವರಿಗೆ ಗೌರವಿಸಲಾಯಿತು.
ಜಯಾನಂದ ಬಂಟ್ರಿಯಾಲ್ ರವರು ಸನ್ಮಾನಿತರನ್ನು ಪರಿಚಯಿಸಿದರು. ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ದಿ ಬೆಸ್ಟ್ ಅವಾರ್ಡ್ ಪಡೆದ ಕುಮಾರಿ ಆರಾಧ್ಯ ಎಸ್ ರೈ ಪ್ರಾರ್ಥಿಸಿದರು. ಈ ಕಾರ್ಯಕ್ರಮದ ಸಂಘಟಕ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಆರಾಧ್ಯ ಬ್ಯೂಟಿ ಪಾರ್ಲರ್ ನ ಮಾಲಕಿ ಶ್ರೀಮತಿ ಸಂಧ್ಯಾ ಅವಿನಾಶ್ ರೈ, ಪ್ರವೀಣ್, ಡಾ.ಸುಧಾಕರ್ ಶೆಟ್ಟಿ, ರಾಕೇಶ್, ಚಂದ್ರಶೇಖರ ಬಾಣಜಾಲು ಮತ್ತು ಮಕ್ಕಳ ಪೋಷಕರು, ಗಣ್ಯರು ಭಾಗವಹಿಸಿದರು ಕಾರ್ಯಕ್ರಮದಲ್ಲಿ ಕುಮಾರಿ ಆರಾಧ್ಯರವರ ಯೋಗ ಪ್ರದರ್ಶನ ನಡೆಯಿತು.