ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಕೆ

ಶೇರ್ ಮಾಡಿ

ಸುಳ್ಯ: ಸಾಮಾನ್ಯರಲ್ಲಿ ಸಾಮಾನ್ಯರಾದ ಕಾರ್ಯಕರ್ತೆ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರನ್ನು ಸುಳ್ಯದಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿರುವುದು ಬಿಜೆಪಿಯ ಹೆಮ್ಮೆ. ದಾಖಲೆಯ ಅಂತರದಲ್ಲಿ ಗೆಲ್ಲಿಸಲು ಎಲ್ಲಾ ಕಾರ್ಯಕರ್ತರು ಪಣ ತೊಡಬೇಕು ಎಂದು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಹಾಗು ರಾಜ್ಯ ಬಿಜೆಪಿ ಚುನಾವಣಾ ಸಹ ಪ್ರಭಾರಿ ಕೆ.ಅಣ್ಣಾಮಲೈ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನಡೆದ ಬೃಹತ್ ಮೆರವಣಿಗೆ ಯಲ್ಲಿ ನೆರೆದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿಗೆ ಹಲವಾರು ನಾಯಕರನ್ನು ಕೊಟ್ಟ, ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ ಕ್ಷೇತ್ರ ಸುಳ್ಯ. ಆದುದರಿಂದ ಸುಳ್ಯದಲ್ಲಿ ಅತೀ ಹೆಚ್ಚಿನ ಅಂತರದ ಗೆಲುವು ಆಗಬೇಕು. ಅದಕ್ಕಾಗಿ ಕಾರ್ಯಕರ್ತರು ಮನೆ ಮನೆ ತೆರಳಿ ಪ್ರಚಾರ ಮಾಡಬೇಕು. ಕೇಂದ್ರ ಹಾಗು ರಾಜ್ಯ ಸರಕಾರದ ಸಾಧನೆಯನ್ನು ಮನೆ ಮನೆ ತಲುಪಿಸಬೇಕು ಎಂದರು.

ಸಚಿವ ಎಸ್. ಅಂಗಾರ ಮಾತನಾಡಿ ಪಕ್ಷದ ಗೆಲುವಿಗೆ ನಿರಂತರ ಶ್ರಮ ವಹಿಸಲಾಗುವುದು. ಬಿಜೆಪಿಯ ಗೆಲುವಿನ ಹೊಣೆಯನ್ನು ನಾನು ಹಾಗೂ ಕಾರ್ಯಕರ್ತರೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಭಾಗೀರಥಿ ಮುರುಳ್ಯ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಸುಳ್ಯ ಮಿನಿ ವಿಧಾನ ಸೌಧದಲ್ಲಿನ ಚುನಾವಣಾ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಅರುಣ್‍ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿಗಳಾದ ಜಿ.ಮಂಜುನಾಥ್, ರಮೇಶ್ ಬಾಬು ಉಪಸ್ಥಿತರಿದ್ದರು. ಭಾಗೀರಥಿ ಮುರುಳ್ಯ ಅವರ ಜೊತೆ ಸಚಿವ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ, ಶ್ರೀಪತಿ ಭಟ್ ಉಪಸ್ಥಿತರಿದ್ದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ನಗರ ದಲ್ಲಿ ಬಿಜೆಪಿ ಕಾರ್ಯಕರ್ತರ ಅದ್ದೂರಿ ಮೆರವಣಿಗೆ ನಡೆಯಿತು. ಶ್ರೀರಾಮಪೇಟೆಯ ಶ್ರೀರಾಮ ಭಜನಾ ಮಂದಿರದ ಬಳಿಯಿಂದ ಮೆರವಣಿಗೆ ನಗರದ ಬೀದಿಯಲ್ಲಿ ಸಾಗಿ ಬಂದಿತು. ಶ್ರೀರಾಮ ಪೇಟೆಯಿಂದ ನಗರದ ರಸ್ತೆಯಲ್ಲಿ ಸಾಗಿ ಬಂದು ರಥಬೀದಿಯಾಗಿ ತಾಲೂಕು ಕಚೇರಿ ಬಳಿಯ ಪುರಭವನದ ಸಮೀಪದವರೆಗೆ ಮೆರವಣಿಗೆ ಸಾಗಿ ಬಂತು. ಬಳಿಕ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವ ಎಸ್.ಅಂಗಾರ, ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮುಖಂಡರಾದ ರಾಧಾಕೃಷ್ಣ ಬೂಡಿಯರ್, ರಾಮದಾಸ್ ಬಂಟ್ವಾಳ್, ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಎ.ವಿ.ತೀಥರಾಮ, ಎನ್.ಎ.ರಾಮಚಂದ್ರ, ರಾಕೇಶ್ ರೈ ಕೆಡೆಂಜಿ, ಸುರೇಶ್ ಕಣೆಮರಡ್ಕ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎನ್.ಜಯಪ್ರಕಾಶ್ ರೈ, ಎಂ.ವೆಂಕಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಮುಖಂಡರಾದ ಡಾ.ರಘು, ಪಿ.ಪಿ.ವರ್ಗೀಸ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಆಗಮಿಸಿ ಬಳಿಕ ಪುರಭವನದ ಸಮೀಪ ಸಮಾವೇಶ ನಡೆಸಿದ ಬಳಿಕ ನಾಮಪತ್ರ ಸಲ್ಲಿಸಲಾಯಿತು. ಮಿನಿ ವಿಧಾನಸೌಧದ ಚುನಾವಣಾ ಕಚೇರಿಯಲ್ಲಿನ ಚುನಾವಣಾಧಿಕಾರಿ ಕಚೇರಿಯಲ್ಲಿ ಕ್ಷೇತ್ರದ ಚುನಾವಣಾಧಿಕಾರಿ ಅರುಣ್‍ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ಜಿ.ಮಂಜುನಾಥ್, ರಮೇಶ್ ಬಾಬು ಸಹಕರಿಸಿದರು. ಜಿ.ಕೃಷ್ಣಪ್ಪ ಅವರು ಎರಡು ಪ್ರತಿ ನಾಮಪತ್ರ ಸಲ್ಲಿಸಿದರು.

Leave a Reply

error: Content is protected !!