ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ನಾಮಪತ್ರ ಸಲ್ಲಿಕೆ

ಶೇರ್ ಮಾಡಿ

ಸುಳ್ಯ:‌ ಕಳೆದ ಮೂರು ದಶಕಗಳಿಗೂ ಅಧಿಕ ಸಮಯದಿಂದ ಕಾಂಗ್ರೆಸ್ ಶಾಸಕರನ್ನು ಕಾಣದ ಸುಳ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿ ವಿಧಾನ ಸಭೆ ಪ್ರವೇಶಿಸಲಿದ್ದಾರೆ. ಈ ಬಾರಿ ಸುಳ್ಯದಲ್ಲಿ ನಡೆಯುವ ಚುನಾವಣೆ ಕಾರ್ಯಕರ್ತರ ಸ್ವಾಭಿಮಾನದ ಚುನಾವಣೆ ಎಂದು ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹ ಮೂರ್ತಿ ಹೇಳಿದರು.

ಅವರು ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು ನಾಮ ಪತ್ರ ಸಲ್ಲಿಸಲಿರುವ ಹಿನ್ನಲೆಯಲ್ಲಿ ಆಯೋಜಿಸಿದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರದ ಬಿಜೆಪಿ ಸರಕಾರದ ಆಡಳಿತ ವೈಖರಿಯಿಂದ ಜನರು ಬೇಸತ್ತು ಹೋಗಿದ್ದಾರೆ. ಆರ್ಥಿಕ ದುಸ್ಥಿತಿಯಿಂದ ರೈತರ, ಜನ ಸಾಮಾನ್ಯರ ಜೀವನ ತತ್ತರಿಸಿದೆ ಎಂದು ಹೇಳಿದ ಅವರು ಬಿಜೆಪಿ ಸರಕಾರ ಶ್ರೀಮಂತರ ಪರ ಇದ್ದರೆ, ಕಾಂಗ್ರೆಸ್ ಬಡವರ, ಹಿಂದುಳಿದವರ ಪಕ್ಷವಾಗಿದೆ ಎಂದರು.
ಮಾಜಿ ಸಚಿವ ಯುಟಿ ಖಾದರ್ ಮಾತನಾಡಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯಬೇಕಾದರೆ ಸುಳ್ಯದ ಅಭ್ಯರ್ಥಿ ಜಿ ಕೃಷ್ಣಪ್ಪರವರ ಗೆಲುವು ಅತಿ ಅವಶ್ಯಕವಾಗಿದೆ. ಪಕ್ಷದ ಅಭ್ಯರ್ಥಿಗಳ ಬಗ್ಗೆ ಯಾವುದೇ ಗೊಂದಲಗಳಿದ್ದರೂ ಕೂಡ ಅವುಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ನೋಡಿ ರಾಜ್ಯದ ಅಭಿವೃದ್ಧಿಯನ್ನು ಬಯಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಾಗಿದೆ. ಬಿಜೆಪಿಯ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದು ಈ ಬಾರಿ ಜನತೆ ಬದಲಾವಣೆಯನ್ನು ಬಯಸುತ್ತಿರುವುದು ಎಲ್ಲಾ ಕಡೆ ಕಂಡು ಬರುತ್ತಿದೆ. ಆದ್ದರಿಂದ ಸ್ವಾಸ್ಥ ಸಮಾಜ ನಿರ್ಮಾಣಕ್ಕಾಗಿ ರಾಜ್ಯದ ಸಂಪೂರ್ಣ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ದುಡಿಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎನ್.ಜಯಪ್ರಕಾಶ್ ರೈ, ಎಂ.ವೆಂಕಪ್ಪ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಮುಖಂಡರಾದ ಡಾ.ರಘು, ಪಿ.ಪಿ.ವರ್ಗೀಸ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಆಗಮಿಸಿ ಬಳಿಕ ಪುರಭವನದ ಸಮೀಪ ಸಮಾವೇಶ ನಡೆಸಿದ ಬಳಿಕ ನಾಮಪತ್ರ ಸಲ್ಲಿಸಲಾಯಿತು. ಮಿನಿ ವಿಧಾನಸೌಧದ ಚುನಾವಣಾ ಕಚೇರಿಯಲ್ಲಿನ ಚುನಾವಣಾಧಿಕಾರಿ ಕಚೇರಿಯಲ್ಲಿ ಕ್ಷೇತ್ರದ ಚುನಾವಣಾಧಿಕಾರಿ ಅರುಣ್‍ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ಜಿ.ಮಂಜುನಾಥ್, ರಮೇಶ್ ಬಾಬು ಸಹಕರಿಸಿದರು. ಜಿ.ಕೃಷ್ಣಪ್ಪ ಅವರು ಎರಡು ಪ್ರತಿ ನಾಮಪತ್ರ ಸಲ್ಲಿಸಿದರು.

Leave a Reply

error: Content is protected !!