ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ ಸರ್ವ ಸಮಾಜದ ಹಿತಕ್ಕಾಗಿ ದುಡಿಯುವೆ – ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ

ಶೇರ್ ಮಾಡಿ

ಪುತ್ತೂರು : ಬುಧವಾರ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳೊಂದಿಗೆ ಬೃಹತ್ ಮೆರವಣಿಗೆಯ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದರು.

ಕೋಡಿಂಬಾಡಿ ಶ್ರೀ ಮಹಿಷಮರ್ಧಿನಿ, ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದರ್ಬೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಜಯಘೋಷ ಮೊಳಗಿಸುತ್ತಾ ಹೆಜ್ಜೆ ಹಾಕಿದರು. ವಿವಿಧ ಕಲಾ ಪ್ರಕಾರ ತಂಡಗಳು, ಚೆಂಡೆ ಬಳಗ, ನಾಸಿಕ್ ಬ್ಯಾಂಡ್ ಮೆರವಣಿಗೆಗೆ ಮೆರಗು ತುಂಬಿತು.

ಮೆರವಣಿಗೆಯಲ್ಲಿ ಕಾಂಗ್ರೆಸ್ ಸಾಧನೆಗಳ ಕುರಿತು ಘೋಷಣೆ ಮೊಳಗಿತು. ಅಶೋಕ್ ಕುಮಾರ್ ರೈ ಪರ ಕಾರ್ಯಕರ್ತರು ಜೈಕಾರ ಹಾಕಿದರು. ದರ್ಬೆಯಿಂದ ಮುಖ್ಯ ರಸ್ತೆಯಾಗಿ ಸಾಗಿ ಕಿಲ್ಲೆ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿನ ಕಾರ್ಯಕರ್ತರು ಸಮಾಗಮಗೊಂಡರು.

ಅಭ್ಯರ್ಥಿ ಅಶೋಕ್ ಕುಮಾರ್ ರೈ ಮಾತನಾಡಿ, ಕಳೆದ ಐದು ವರ್ಷದ ಬಿಜೆಪಿ ಆಡಳಿತದಲ್ಲಿ ಅಕ್ರಮ-ಸಕ್ರಮ, 94ಸಿಯಲ್ಲಿ ಬಡವರನ್ನು ಲೂಟಿ ಮಾಡಲಾಗಿದೆ. ಶಾಸಕನಾಗಿ ಆಯ್ಕೆಯಾದ ಬಳಿಕ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ ಸರ್ವ ಸಮಾಜದ ಹಿತಕ್ಕಾಗಿ ದುಡಿಯುವೆ ಎಂದರು.

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ಜಿಲ್ಲಾ ಉಸ್ತುವಾರಿ ಶಿಭಾ ರಾಮಚಂದ್ರನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾಲೆಟ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!