ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅತ್ಯಂತ ಪ್ರತಿಷ್ಠೆಯ ಕಣಗಳಲ್ಲಿ ಪುತ್ತೂರು ಕೂಡಾ ಒಂದು. ಮೂಲ ಹಿಂದುತ್ವ, ಮೂಲ ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಇಲ್ಲಿ ಹಿಂದಿನಿಂದಲೂ ಮುಖಾಮುಖಿ ನಡೆಯುತ್ತಲೇ ಇದೆ. ಈ ಬಾರಿಯೂ ತಾರಕಕ್ಕೆ ಹೋಗಿದೆ.
ಪುತ್ತೂರಿನ ಚುನಾವಣಾ ಕಣದಲ್ಲಿ ಈಗ ಹಿಂದುತ್ವ v/s ಬಿಜೆಪಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಹಾಲಿ ಶಾಸಕರಾಗಿರುವ ಸಂಜೀವ ಮಠಂದೂರು ಅವರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ ಅವರ ಜಾಗಕ್ಕೆ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರನ್ನು ತಂದು ಕೂರಿಸಿದೆ. ಇದನ್ನು ಕಂಡು ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಿಂದು ಮುಖಂಡ ಅರುಣ್ ಪುತ್ತಿಲ ಸಿಟ್ಟಿಗೆದ್ದಿದ್ದಾರೆ. ಅವರು ಮೊದಲು ಸಭೆಯೊಂದನ್ನು ನಡೆಸಿ ಬಳಿಕ ದೊಡ್ಡ ಮೆರವಣಿಗೆ ಮೂಲಕ ನಾಮಪತ್ರವನ್ನೂ ಸಲ್ಲಿಸಿದ್ದಾರೆ.
ಹಿಂದು ಸಂಘಟನೆಗಳಲ್ಲಿ ಕೆಲಸ ಮಾಡಿರುವ ಅರುಣ್ ಪುತ್ತಿಲ ಅವರು ಕಣಕ್ಕಿಳಿದಿರುವುದು, ಅವರಿಗೆ ಸಿಗುತ್ತಿರುವ ಜನಬೆಂಬಲ ಮತ್ತು ಹಿಂದುಗಳಲ್ಲಿರುವ ಆಕ್ರೋಶವನ್ನು ಮನಗಂಡ ಬಿಜೆಪಿ ಇದೀಗ ಸೋಲಿನ ಭೀತಿಯನ್ನು ಎದುರಿಸುತ್ತಿದೆ.
ಹೀಗಾಗಿ ಅರುಣ್ ಪುತ್ತಿಲ ಅವರನ್ನು ಹೇಗಾದರೂ ಮಾಡಿ ನಿಯಂತ್ರಿಸಬೇಕು ಎನ್ನುವ ಉದ್ದೇಶದಿಂದ ಜಗದೀಶ್ ಕಾರಂತ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.