ಉಪ್ಪಿನಂಗಡಿ: ಬದುಕಿನಲ್ಲಿ ಹಲವು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಜೀವನವನ್ನು ಮುನ್ನಡೆಸುತ್ತಿರುವ ಇಲ್ಲಿನ ಗಾಂಧೀಪಾರ್ಕ್ ಬಳಿಯ ನಿವಾಸಿ 72ರ ಹರೆಯದ ಹಿರಿ ಜೀವ ಆನಂದ ಟೈಲರ್ ಅವರಿಗೆ ಅದೃಷ್ಟ ಲಕ್ಷ್ಮೀ ಒಲಿದಿದ್ದು, ಕೇರಳ ರಾಜ್ಯ ಲಾಟರಿ “ಕಾರುಣ್ಯ’ದ ಪ್ರಥಮ ಬಹುಮಾನವಾದ 80 ಲಕ್ಷ ರೂ. ವಿಜೇತರಾಗಿದ್ದಾರೆ.
ಮಧ್ಯಮ ವರ್ಗದ ಕುಟುಂಬದ ಆನಂದ 30 ವರ್ಷಗಳ ಕಾಲ ಟೈಲರ್ ಆಗಿ ದುಡಿದವರು. ಸ್ಥಳೀಯ ಗ್ರಾ.ಪಂ. ಸದಸ್ಯರಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಬಳಿಕ ಕಾಲಿನ ಸಮಸ್ಯೆಯಿಂದಾಗಿ ವೃತ್ತಿಯನ್ನು ಬಿಡಬೇಕಾಯಿತು.
ಆನಂದ ಅವರಿಗೆ ಲಾಟರಿ ಟಿಕೆಟ್ ಖರೀದಿಯ ಹವ್ಯಾಸವೇನೂ ಇರಲಿಲ್ಲ. ಯಾವಾಗಲಾದರೊಮ್ಮೆ ಮಗಳ ಮನೆ ಕೇರಳಕ್ಕೆ ಹೋದಾಗ ಖರೀದಿಸುವ ಕ್ರಮವಿತ್ತು. ಹಾಗೆಯೇ ಕಳೆದ ವಾರ “ಕಾರುಣ್ಯ’ ಲಾಟರಿಯನ್ನು ಕೊಂಡುಕೊಂಡಿದ್ದರು. ಎ. 15ರಂದು ಡ್ರಾ ಆದಾಗ ಅವರಿಗೆ ಪ್ರಥಮ ಬಹುಮಾನ ಒಲಿದಿದೆ. ತೆರಿಗೆ ಮೊತ್ತಗಳೆಲ್ಲ ಕಳೆದು ಅವರಿಗೆ 56 ಲಕ್ಷ ರೂ. ಕೈ ಸೇರಲಿದೆ.
ಪತ್ನಿ ಗೃಹಿಣಿ. ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರ ವಿದ್ಯಾಭ್ಯಾಸದ ಬಳಿಕ ಪುತ್ರಿಯನ್ನು ಕೇರಳದ ನೀಲೇಶ್ವರಕ್ಕೆ ಮದುವೆ ಮಾಡಿಕೊಡಲಾಗಿದೆ. ಪುತ್ರರಿಬ್ಬರು ಉದ್ಯೋಗ ಮಾಡಿಕೊಂಡು ಕುಟುಂಬದ ಆಧಾರವಾಗಿದ್ದರು.