ಜಗದೀಶ್ ಶೆಟ್ಟರ್ ವಾಪಸ್ ಬಿಜೆಪಿಗೆ ಬರ್ತಾರೆ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಶೇರ್ ಮಾಡಿ

ಮಂಗಳೂರು: ಜಗದೀಶ್ ಶೆಟ್ಟರ್ ವಾಪಸ್ ಬಿಜೆಪಿಗೆ ಬರ್ತಾರೆ ಹೇಳಿಕೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಆ ಬಗ್ಗೆ ಭವಿಷ್ಯ ನುಡಿಯಲ್ಲ, ಯಾರ ರಕ್ತ ಪರೀಕ್ಷೆ ಮಾಡಿ ಪಕ್ಷ ತೆಗೆದುಕೊಂಡಿಲ್ಲ. ತತ್ವ, ನೀತಿ ಒಪ್ಪಿಕೊಂಡು ಬರೋರಿಗೆ ಸ್ವಾಗತ ಇದೆ.

ಅವರು ಬರುವುದು, ಹೋಗೋದು ಅನ್ನೋದು ನಮಗೇನು ಗೊತ್ತಿಲ್ಲ, ಆದ್ರೆ ಕಾಂಗ್ರೆಸ್ ಪಕ್ಷದ ತತ್ವ ಒಪ್ಪಿಕೊಂಡು ಬರುವವರನ್ನು ನಾವು ಸ್ವಾಗತ ಮಾಡುತ್ತೇವೆ ಮತ್ತು ನಮ್ಮ ಪಕ್ಷವನ್ನು ನಿಯತ್ತಾಗಿ ಒಪ್ಪಿ ನಾಯಕತ್ವ ಒಪ್ಪಿ ಬಂದವರನ್ನು ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಸಿದ್ದರಾಮಯ್ಯ ಹೇಳಿಕೆಯಿಂದ ಬಿಜೆಪಿಗೆ ಓಟ್ ಬರುತ್ತದೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿದ ಖರ್ಗೆಯವರು ಹಾಗಾದರೆ ಬಿಜೆಪಿಯವರು ಏನು ಕೆಲಸ ಮಾಡಿಲ್ಲ ಅಂತ ಅರ್ಥ. ಸಹಜವಾಗಿ ಬಿಜೆಪಿಯವರು ಗೆಲ್ಲುವ ಸ್ಥಿತಿಯಲ್ಲಿ ಇಲ್ಲದೆ ಈ ರೀತಿ ಮಾತನಾಡುತ್ತಾರೆ ಎಂದರು.

ರಾಜಕೀಯ ಪಕ್ಷಗಳು ಅವರವರ ರೀತಿಯಲ್ಲಿ ಕೆಲಸ ಮಾಡುತ್ತಾರೆ. ತಮ್ಮ ಜಾತಿ, ಧರ್ಮ ಚುನಾವಣೆ ರಾಜಕೀಯದಲ್ಲಿ ಬಂದರೆ ಒಳ್ಳೆಯದಲ್ಲ. ಸಂವಿಧಾನದ ಇತಿಮಿತಿಗಳಲ್ಲಿ ನಾವು ಮಾತನಾಡಿದರೆ ಒಳ್ಳೆಯದು. ಓಟಿಗಾಗಿ ಮಾತನಾಡಿದರೆ ಸಮಾಜ ಮತ್ತು ದೇಶಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ವೇಗ ಪಡೆದಿದ್ದು ಕರಾವಳಿ ಜಿಲ್ಲೆಯಲ್ಲೂ ಚುನಾವಣಾ ಕಣ ರಂಗೇರಿದೆ. ವಿವಿಧ ರಾಜ್ಯ, ರಾಷ್ಟ್ರ ನಾಯಕರ ದಂಡೇ ಆಗಮಿಸುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಇಂದು ಸಂಜೆ ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ ಗೆ ಆಗಮಿಸಿದ ಖರ್ಗೆಯವರನ್ನು ಜಿಲ್ಲಾ ರಾಜ್ಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು.
ಇಂದು ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿರುವ ಖರ್ಗೆಯವರು ನಾಳೆ ಬೆಳಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಳಿಕ ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.
ಬಳಿಕ ಸಂಜೆ 4 ಗಂಟೆಗೆ ಮತ್ತೆ ಮಂಗಳೂರಿನಿಂದ ಕಾಂಗ್ರೆಸ್ ಪ್ರಮುಖರ ಸಭೆ ನಡೆಸಿ ಸಂಜೆ 6 ಗಂಟೆಗೆ ಮಂಗಳೂರಿಂದ ವಾಪಸ್ ತೆರಳಲಿದ್ದಾರೆ.

Leave a Reply

error: Content is protected !!