ಪುತ್ತೂರು: ಕಂಬಳದಲ್ಲಿ ಕೋಣಗಳ ಮೇಲೆ ಹೊಡೆಯಬಾರದು ಎಂದು ಹೇಳುತ್ತಾರೆ. ಅದಕ್ಕಿಂತಲೂ ಅಮಾನವೀಯವಾದ ಕೃತ್ಯ. ಆದ್ದರಿಂದ ಈ ಘಟನೆಗೆ ಕಾರಣರಾದ ಡಿವೈಎಸ್ಪಿಯನ್ನೇ ಅಮಾನತು ಮಾಡುವಂತೆ ಹಿಂದೂ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಆಗ್ರಹಿಸಿದರು.
ಗುರುವಾರ ಪುತ್ತೂರು ಮಹಾವೀರ ಆಸ್ಪತ್ರೆಗೆ ಆಗಮಿಸಿ ಪೊಲೀಸರಿಂದ ಹಲ್ಲೆಗೊಳಗಾಗಿ ದಾಖಲಾಗಿರುವ ಯುವಕರ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡಿದರು.
ಸರ್ಕಾರ ಬಂದು 2-3 ದಿನ ಆಗಿದೆಯಷ್ಟೇ. ಅಷ್ಟರಲ್ಲಿ ಇಂತಹ ಘಟನೆ ನಡೆದಿದೆ. ಪೊಲೀಸರಲ್ಲಿ ಕೇಳಿದರೆ ಮೇಲಿನಿಂದ ಒತ್ತಡ ಎಂದು ಹೇಳುತ್ತಾರೆ. ಮೇಲಿನಿಂದ ಎಂದರೆ ಯಾರು? ಸರ್ಕಾರ ಎಂದಾದರೆ ಖಂಡಿತವಾಗಿಯೂ ಈ ವಿಷಯವನ್ನು ಇಲ್ಲಿಗೇ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಾರ್ಯಕರ್ತರಿಂದ ತಪ್ಪು ಆಗುತ್ತದೆ. ಅವರೇನೂ ಕೊಲೆ ಮಾಡಿದ್ದಾರೆಯೇ? ಅಥವಾ ಅಕ್ಷಮ್ಯ ಅಪರಾಧ ಎಸಗಿದ್ದಾರೆಯೇ? ಸ್ವಲ್ಪ ಬುದ್ಧಿವಾದ ಹೇಳಬಹುದಿತ್ತು. ಹಾಗೆಂದು ಈ ರೀತಿ ಹೊಡೆಯುವುದು ಸರಿಯಲ್ಲ. ಇದು ನೂರಕ್ಕೆ ನೂರು ಖಂಡನೀಯ ಎಂದರು.