ಕಂಬಳ ಪರ ಸುಪ್ರೀಂ ಕೋರ್ಟ್ ತೀರ್ಪು; 12 ವರ್ಷಗಳ ಹೋರಾಟಕ್ಕೆ ಸಂದ ಜಯ: ಅಶೋಕ್‌ ಕುಮಾರ್ ರೈ

ಶೇರ್ ಮಾಡಿ

ಪುತ್ತೂರು: ಕಂಬಳ ಪರ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಉಪ್ಪಿನಂಗಡಿ ವಿಜಯವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ಪ್ರಸ್ತುತ ಶಾಸಕರಾಗಿರುವ ಅಶೋಕ್ ಕುಮಾರ್ ರೈ ಅವರು ಸುದೀರ್ಘ 12 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.

ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದಿಂದ ಈ ಕ್ರೀಡೆ ನಡೆಯುತ್ತಿತ್ತು. ಹೆಚ್ಚಾಗಿ ನವೆಂಬರ್ ಬಳಿಕ ಮಾರ್ಚ್ ತನಕ ಕರಾವಳಿ ಜಿಲ್ಲೆಗಳಲ್ಲಿ ಈ ಕ್ರೀಡೆ ನಡೆಯುತ್ತದೆ. ಕಂಬಳದಲ್ಲಿ ಎರಡು ಬಲಿಷ್ಟ ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುತ್ತದೆ. ಈ ಸಮಯದಲ್ಲಿ ಕೋಣಗಳು ಅತೀ ವೇಗವಾಗಿ ಓಡಲಿಕ್ಕಾಗಿ ಓಡಿಸುವ ವ್ಯಕ್ತಿ ಕೋಣಗಳಿಗೆ ಹಿಂಸಾತ್ಮ ರೀತಿಯಲ್ಲಿ ಪೆಟ್ಟು ಕೊಡುತ್ತಾರೆ ಎಂದು ಪ್ರಾಣಿ ದಯಾಸಂಘ (ಪೇಟಾ) ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಕಂಬಳವನ್ನು ನಿಷೇಧಿಸುವಂತೆ ಆಗ್ರಹಿಸಿತ್ತು. ಪೇಟಾ ನ್ಯಾಯಾಲಯದಲ್ಲಿ ಮಾಡಿರುವ ಆರೋಪಗಳಲ್ಲಿ ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಎಳೆಯುವಿಕೆ, ಕುಣಿಯುವಿಕೆ ಮತ್ತು ಮೂಗಿನ ಹಗ್ಗಗಳ ಒರಟು ನಿರ್ವಹಣೆ ಮೂಲಕ ಪ್ರಾಣಿಗಳಿಗೆ ಹಿಂಸಾತ್ಮಕ ರೀತಿಯಲ್ಲಿ ಕೌರ್ಯವನ್ನು ಮೆರೆಯಲಾಗಿತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ದಾವೆಯಲ್ಲಿ ತಿಳಿಸಿತ್ತು. ಕಂಬಳದ ಜೊತೆ ತಮಿಳುನಾಡಿನಲ್ಲಿ ಸುಗ್ಗಿಯ ಹಬ್ಬ ಪೊಂಗಲ್ ಬಳಿಕ ಗೂಳಿಯನ್ನು ಪಳಗಿಸುವ ಜಲ್ಲಿಕಟ್ಟು ವಿರುದ್ಧವೂ ಪೇಟಾ ದಾವೆಯನ್ನು ಹೋಡಿತ್ತು. ಎರಡೂ ಪ್ರಕರಣಗಳು ಸುಪ್ರೀಂ ಕೋರ್ಟ್ ನಲ್ಲಿತ್ತು.

ಪೇಟಾ ಹೂಡಿರುವ ದಾವೆಯ ವಿರುದ್ಧ ಕಂಬಳದ ಪರವಾಗಿ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಲ ಸಮಿತಿ ಅಧ್ಯಕ್ಷರಾದ, ಪ್ರಸ್ತುತ ಪುತ್ತೂರು ಶಾಸಕರಾಗಿರುವ ಅಶೋಕ್‍ ಕುಮಾರ್ ರೈಯವರು ಪೇಟಾ ವಿರುದ್ಧ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಕಂಬಳ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಇದರಲ್ಲಿ ಯಾವುದೇ ರೀತಿಯ ಪ್ರಾಣಿ ಹಿಂಸೆಯಾಗುತ್ತಿಲ್ಲ. ಕಂಬಳದ ಬಗ್ಗೆ ಪೇಟಾ ಮಾಡಿರುವ ಆರೋಪಗಳು ನ್ಯಾಯಬದ್ಧತೆಯಿಂದ ಕೂಡಿಲ್ಲ ಎಂದು ಕಂಬಳ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುವ ಮೂಲಕ ಕಂಬಳದಲ್ಲಿ ಪ್ರಾಣಿ ಹಿಂಸೆಯಿಲ್ಲ ಎಂಬುದನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಕಂಬಳ ಸಮಿತಿ ಅಧ್ಯಕ್ಷರಾದ ಅಶೋಕ್ ರೈಯವರ ಏಕಾಂಗಿ ಹೋರಾಟಕ್ಕೆ ಜಯ ದೊರಕಿದ್ದು ಕಂಬಳ ಪರವಾಗಿ ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಮುಂದಿನ ದಿನಗಳಲ್ಲಿ ಕಂಬಳ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಸಬಹುದಾಗಿದೆ.

ಹೋರಾಟಕ್ಕೆ ಸಂದ ಜಯ: ಅಶೋಕ್ ರೈ
ಕಂಬಳದ ವಿರುದ್ಧ ಪೇಟಾ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದಾಗ ಅದರ ವಿರುದ್ಧ ನಾನು ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟವನ್ನು ನಡೆಸಿದ್ದೆ. ಕಂಬಳ ಸಮಿತಿಗಳ ಪರವಾಗಿ ತಾನು ಸುಪ್ರೀಂ ಕೋರ್ಟ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು ಕಂಬಳ ಕೂಟಕ್ಕೆ ಪ್ರಾಚೀನ ಇತಿಹಾಸವಿದೆ. ಧಾರ್ಮಿಕ ಪರಂಪರೆ ಇದೆ, ಕಂಬಳದಲ್ಲಿ ಕೋಣಗಳಿಗೆ ಹಿಂಸೆಯಾಗುವುದಿಲ್ಲ, ಮಕ್ಕಳಂತೆ ಕೋಣಗಳನ್ನು ಸಾಕಿ ಸಲಹಲಾಗುತ್ತಿದೆ ಆದ್ದರಿಂದ ಕಂಬಳ ಕೂಟಕ್ಕೆ ನಿಷೇಧ ಹೇರಬಾರದು. ಎಂದಿನಂತೆ ಕಂಬಳ ಕೂಟ ಆಯೋಜನೆಗೆ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯದ ಮೂಲಕ ಮನವಿಯನ್ನು ಮಾಡಿದ್ದೆ. ನನ್ನ ಸತತ 12 ವರ್ಷಗಳ ಹೋರಾಟಕ್ಕೆ ತೀರ್ಪು ನಮ್ಮ ಪರ ಬಂದಿದೆ. ಇದು ತನಗೆ ಅತೀವ ಸಂತಸವನ್ನು ತಂದಿದೆ ಎಂದು ಉಪ್ಪಿನಂಗಡಿ ವಿಜಯವಿಕ್ರಮ ಕಂಬಳ ಸಮಿತಿ ಅಧ್ಯಕ್ಷರೂ, ಶಾಸಕರೂ ಆಗಿರುವ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದ್ದಾರೆ.

Leave a Reply

error: Content is protected !!