ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೊಳಗಾದವರ ಭೇಟಿಗೆ ಆಗಮಿಸಿದ ಬಿಜೆಪಿ ಮುಖಂಡರನ್ನು ಹೊರದಬ್ಬಲಾಗಿದೆಯೇ? ವಿಡಿಯೋ ವೈರಲ್..!!

ಶೇರ್ ಮಾಡಿ

ಪುತ್ತೂರು: ಬ್ಯಾನರ್ ವಿಚಾರದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವವರ ಭೇಟಿಗೆ ವಿಜಯಪುರ ಶಾಸಕ ಆಗಮಿಸಿದ ವೇಳೆ ಬಿಜೆಪಿ‌ ಮುಖಂಡರನ್ನು ಪುತ್ತಿಲ ಬೆಂಬಲಿಗರು ಆಸ್ಪತ್ರೆ ಕೊಠಡಿಯಿಂದ ಹೊರದಬ್ಬಿದ ಘಟನೆ ಶುಕ್ರವಾರ ನಡೆದಿರುವುದು ವರದಿಯಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದ ಗೌಡರ ಬಗ್ಗೆ ಅವಹೇಳನಕಾರಿ ಬ್ಯಾನರ್ ಅಳವಡಿಸಿದ ಆರೋಪದಲ್ಲಿ ಬಂಧನಕ್ಕೊಳಗಾದ ಸಂಘ ಪರಿವಾರದ ಕಾರ್ಯಕರ್ತರು ಪೊಲೀಸ್ ದೌರ್ಜನ್ಯಕ್ಕೊಳಗಾಗಿದ್ದಾರೆ. ಈ ಪೈಕಿ ಆಸ್ಪತ್ರೆಗೆ ದಾಖಲಾಗಿರುವವರನ್ನು ಭೇಟಿಯಾಗಲು ಇಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಆಗಮಿಸಿದ್ದರು. ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಆಗಮಿಸಿದ ಯತ್ನಾಳ್ ಸಮ್ಮುಖವೇ ಬಿಜೆಪಿ ನಾಯಕರು ಹಾಗೂ ಸಂಘ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ನಡುವೆ ನೂಕಾಟ-ತಳ್ಳಾಟ ನಡೆದಿದೆ.
ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಕೊಠಡಿಯೊಳಗೆ ಕೇವಲ ಬಸನಗೌಡ ಪಾಟೀಲ್ ಅವರನ್ನು ಮಾತ್ರ ಬಿಟ್ಟ ಪುತ್ತಿಲ ಪರ ಬೆಂಬಲಿಗರು ಅವರ ಜೊತೆ ಆಗಮಿಸಿದ್ದ ಬಿಜೆಪಿ ಹಾಗೂ ಬಿಜೆಪಿ ಪರ ಇರುವ ಸಂಘ ಪರಿವಾರದ ಮುಖಂಡರನ್ನು ಬಾಗಿಲಿನಿಂದಲೇ ತಳ್ಳಿ ಹೊರದಬ್ಬಿದ್ದಾರೆ. ಈ ಸಂದರ್ಭ ಎರಡೂ ತಂಡಗಳ ಮಧ್ಯೆ‌ ತಳ್ಳಾಟ- ನೂಕಾಟ ನಡೆದಿದ್ದು, ಇದರ ವೀಡಿಯೋ ವೈರಲ್ ಆಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋತ ಬಳಿಕ ನಳಿನ್ ಕುಮಾರ್ ಕಟೀಲು ಮತ್ತು ಡಿ.ವಿ.ಸದಾನಂದ ಗೌಡರ ಫೋಟೊಗಳಿರುವ ಬ್ಯಾನರ್ ವೊಂದು ಪುತ್ತೂರಿನಲ್ಲಿ ಪ್ರತ್ಯಕ್ಷವಾಗಿದ್ದು, ಆ ಬ್ಯಾನರ್ ಚಪ್ಪಲಿ ಹಾರ ಕೂಡಾ ಹಾಕಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತರ ಮೇಲೇ ತೀವ್ರ ರೀತಿಯ ಪೊಲೀಸ್ ದೌರ್ಜನ್ಯ ನಡೆದಿರುವುದಾಗಿ ಆರೋಪಿಸಲಾಗಿದೆ. ಇದು ಸಂಘ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

Leave a Reply

error: Content is protected !!