ಮಲೇರಿಯಾ, ಡೆಂಗ್ಯು ದಿನಾಚರಣೆ; ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ಲೈಟ್ ವಿತರಣೆ

ಶೇರ್ ಮಾಡಿ

ರಾಮಕುಂಜ: ಮುತ್ತೂಟ್ ಫೈನಾನ್ಸ್, ಕಸ್ವಿ ಹಸಿರು ದಿಬ್ಬಣ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಪುತ್ತೂರು ತಾಲೂಕು ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಮಲೇರಿಯಾ, ಡೆಂಗ್ಯು ದಿನಾಚರಣೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ಲೈಟ್ ವಿತರಣೆ ಮತ್ತು ತರಬೇತಿ ಕಾರ್ಯಕ್ರಮ ಶುಕ್ರವಾರ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಳ್ಯ ನೂತನ ಶಾಸಕಿ ಭಾಗೀರಥಿ ಮುರುಳ್ಯ ಮುತ್ತೂಟ್ ಫೈನಾನ್ಸ್ ಹಲವು ಸಾಮಾಜಿಕ ಕೆಲಸ ಮಾಡುತ್ತಿದೆ. ಕತ್ತಲೆಯಿಂದ ಬೆಳಕಿನೆಡೆ ಬರಬೇಕೆಂಬ ದೃಷ್ಟಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಟಾರ್ಚ್ ಲೈಟ್ ವಿತರಣೆ ಮಾಡುವ ಮೂಲಕ ಮಲೇರಿಯಾ, ಡೆಂಗ್ಯು ತಡೆಗಟ್ಟುವ ನಿಟ್ಟಿನಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ. ಆಶಾ ಕಾರ್ಯಕರ್ತೆಯರು ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಕಡಬ ತಾಲೂಕು ಮಾದರಿ ಆಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುವುದಾಗಿ ಸುಳ್ಯ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅತಿಥಿಯಾಗಿ ಭಾಗವಹಿಸಿದ್ದ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಮಾತನಾಡಿ, ಡೆಂಗ್ಯು, ಮಲೇರಿಯಾ ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ಈ ರೋಗ ಬಾರದಂತೆ ತಡೆಗಟ್ಟುವುದು ಅತೀ ಅಗತ್ಯವಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಈ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದರು.

ಕಸ್ವಿ ಹಸಿರು ದಿಬ್ಬಣದ ಮುಖ್ಯಸ್ಥ ಕೇಶವ ರಾಮಕುಂಜ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸ್ಪಂದಿಸುವ ಕೆಲಸ ಮುತ್ತೂಟ್ ಫೈನಾನ್ಸ್ ಮಾಡುತ್ತಿದೆ. ಕಸ್ವಿ ಹಸಿರು ದಿಬ್ಬಣದ ಸಹಯೋಗದಲ್ಲಿ ರಾಮಕುಂಜದ ನೆಕ್ಕರೆ ಪರಿಸರದಲ್ಲಿ 600 ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ದಿನೇಶ್ ಕೋಡಿಯಾಲ್‌ಬೈಲ್ ಹಾಗೂ ಮಾಧವ ಉಳ್ಳಾಲ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ 70 ಸಾವಿರಕ್ಕೂ ಹೆಚ್ಚು ಗಿಡ ನೆಡಲಾಗಿದೆ. ಸುಮಾರು 19 ಮಂದಿಯ ಹುಟ್ಟುಹಬ್ಬ ಆಚರಣೆಯ ಜೊತೆಗೆ ಗಿಡ ನೆಡುವ ಕಾರ್ಯಕ್ರಮವೂ ಮಾಡಲಾಗಿದೆ. ಅಭಿವೃದ್ಧಿಗೆ ಮರ ತೆರವುಗೊಂಡಲ್ಲಿ ಗಿಡ ನೆಡುವ ಕೆಲಸ ಆಗಬೇಕೆಂದು ಹೇಳಿದರು.

ರಾಮಕುಂಜ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಎನ್.ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಅಧಿಕಾರಿ ಡಾ.ನವೀನ್‌ಚಂದ್ರ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಸತೀಶ್ ಭಟ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು ಮಾತನಾಡಿದರು.

ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಮುತ್ತೂಟ್ ಫೈನಾನ್ಸ್ ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕಿ ನಮಿತ ಕಾಮತ್ ಎಂ., ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಿನ್ಸಿಪಾಲ್ ಚಂದ್ರಶೇಖರ ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಅಧಿಕಾರಿ ಡಾ.ನವೀನ್‌ಚಂದ್ರ ಅವರು ಮಲೆರಿಯಾ, ಡೆಂಗ್ಯು ತಡೆಗಟ್ಟುವ ಕುರಿತು ಮಾಹಿತಿ ನೀಡಿದರು. ಮುತ್ತೂಟ್ ಫೈನಾನ್ಸ್ನ ಮಂಗಳೂರು ವಿಭಾಗದ ಮೇನೇಜರ್(ಸಿಎಸ್‌ಆರ್) ಪ್ರಸಾದ್‌ ಕುಮಾರ್‌ರವರು ಫೈನಾನ್ಸ್ನ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿಯವರ ನೇತೃತ್ವದ ಅಧಿಕಾರಿಗಳ ತಂಡ ರಾಮಕುಂಜ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿನ ಗಣಿತ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಸೈನ್ಸ್ ಪಾರ್ಕ್ಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

100ಕ್ಕೂ ಅಧಿಕ ಟಾರ್ಚ್ ಲೈಟ್ ವಿತರಿಸಲಾಯಿತು. ಇದೇ ವೇಳೆ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು.

ಮುತ್ತೂಟ್ ಫೈನಾನ್ಸ್ ಮಂಗಳೂರು ವಿಭಾಗದ ಮೇನೇಜರ್(ಸಿಎಸ್‌ಆರ್) ಪ್ರಸಾದ್‌ ಕುಮಾರ್ ಸ್ವಾಗತಿಸಿದರು. ಕೇಶವ ರಾಮಕುಂಜ ವಂದಿಸಿದರು. ಜೆಸಿಐನ ವಲಯ ತರಬೇತಿ ವಿಭಾಗದ ನಿರ್ದೇಶಕ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು. ಅನುಶ್ರೀ ಉಡುಪ ಪ್ರಾರ್ಥಿಸಿದರು.

Leave a Reply

error: Content is protected !!