ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ನೂತನ ಸಂಸತ್ ಭವನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಉದ್ಘಾಟಿಸಿದರು.
ಪುರೋಹಿತರಿಂದ ಸೆಂಗೋಲ್ ಸ್ವೀಕರಿಸಿದ ಪ್ರಧಾನಿ ಮೋದಿಯವರು ಲೋಕಸಭಾ ಸ್ಪೀಕರ್ ಆಸನದ ಬಳಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಸಂಸತ್ ಭವನ ಪ್ರವೇಶಿಸಿದ ಮೋದಿಯವರು ಮೊದಲಿಗೆ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಗಣಪತಿ ಪೂಜೆ ಮೂಲಕ ಹವನ ಆರಂಭವಾಯಿತು.
ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೂ ವಿವಿಧ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ಸಂಸತ್ ಭವನಕ್ಕೆ ಪ್ರಧಾನಿ ಮೋದಿ ಅವರೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಾಥ್ ನೀಡಿದ್ದಾರೆ.
ಸಂಸತ್ ಭವನದ ಕಟ್ಟಡ ನಿರ್ಮಿಸಿದ ಕಾರ್ಮಿಕರಿಗೆ ಪ್ರಧಾನಿ ಮೋದಿ ಸನ್ಮಾನ ಮಾಡಿದ್ದಾರೆ. ಪೂಜಾ-ಕೈಂಕರ್ಯಗಳನ್ನು ಕರ್ನಾಟಕದ ಶೃಂಗೇರಿಯ ಪುರೋಹಿತರಾದ ಸೀತಾರಾಮ ಶರ್ಮಾ, ಶ್ರೀರಾಮ ಶರ್ಮಾ, ಲಕ್ಷ್ಮೀಶ ತಂತ್ರಿರಿಂದ ನೆರವೇರಿಸಿದರು.
ನೂತನ ಸಂಸತ್ ಭವನದಲ್ಲಿ ವಿವಿಧ ಧರ್ಮದ ಮುಖಂಡರಿಂದ ಪ್ರಾರ್ಥನೆ ಆರಂಭವಾಗಿದ್ದು, ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಸಚಿವ ಪ್ರಹ್ಲಾದ ಜೋಶಿ, ಎಸ್. ಜೈಶಂಕರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ಭಾಗಿಯಾಗಿದ್ದಾರೆ.