ಕೊಣಾಜೆ: ಕರ್ನಾಟಕದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚುತ್ತಿವೆ. ಆದರೆ ಗುಣಮಟ್ಟ ಕುಸಿಯುತ್ತಿದೆ. ಆರ್ಥಿಕ ಸಂಪನ್ಮೂಲ ಒದಗಿಸಿ ವಿವಿಯ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನಗಳು ಅಗತ್ಯವಾಗಿ ಆಗಬೇಕಿದೆ. ಪ್ರೊ.ಯಡಪಡಿತ್ತಾಯರು ಓರ್ವ ಸಮರ್ಥ ಕುಲಪತಿಯಾಗಿ ಮಂಗಳೂರು ವಿವಿಯಲ್ಲಿ ಹಾಕಿರುವ ಅಭಿವೃದ್ಧಿ ಯೋಜನೆಗಳ ತಳಪಾಯದಿಂದ ಮಂಗಳೂರು ವಿವಿಯ ಕೀರ್ತಿ ಇನ್ನಷ್ಟು ಬೆಳಗುವಂತಾಗಲಿ ಹಾಗೂ ಸಮಾಜಕ್ಕೆ ಅವರ ಸೇವೆ ಇನ್ನಷ್ಟು ಮುಂದುವರಿಯಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರೂ ಆಗಿರುವ ಪದ್ಮವಿಭೂಷಣ ರಾಜರ್ಷಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹಾರೈಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನಿವೃತ್ತಿ ಹೊಂದಲಿರುವ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರಿಗೆ ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ನೆರವೇರಿಸಿ ಮಾತನಾಡಿದರು.
ಪ್ರೊ.ಯಡಪಡಿತ್ತಾಯ ಅವರು ತಮ್ಮ ಪರಿಶ್ರಮ, ಸಾಧನೆಯ ಮೂಲಕ ಹಂತ ಹಂತವಾಗಿ ಉನ್ನತ ಹುದ್ದೆಗೇರಿದ್ದಾರೆ. ಅವರ ಪ್ರಗತಿಯ ಚಿಂತನೆಗಳಿಗೆ ಕೊರೊನದ ಎರಡು ವರ್ಷದ ಹಿನ್ನಡೆಯಾಗಿದ್ದರೂ ಅವರ ಪ್ರಗತಿಪರ ಚಿಂತನೆಗಳಿಂದ ಮಂಗಳೂರು ವಿವಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿದೆ ಎಂದರು.
ತಾವು ಹಾಕಿದ ಅಭಿವೃದ್ಧಿಯ ಅಡಿಪಾಯ ಹೆಮ್ಮರವಾಗಿ ಬೆಳೆದು ಮಂಗಳೂರು ವಿವಿ ಕೀರ್ತಿ ಬೆಳಗುವಂತಾಗಲಿ.
ನನ್ನ ಸಂಸ್ಥೆಯಲ್ಲಿಯೇ ಕಲಿತ ವಿದ್ಯಾರ್ಥಿಯಾಗಿ ಕುಲಪತಿ ಹುದ್ದೆಗೇರಿ ಸಮರ್ಥ ಕುಲಪತಿಯಾಗಿರುವ ಪ್ರೊ.ಯಡಪಡಿತ್ತಾಯ ಅವರನ್ನು ಸನ್ಮಾನಿಸಿರುವುದು ನನಗೂ ಸಂತಸ ತಂದಿದೆ ಎಂದರು.
ಉನ್ನತ ಹುದ್ದೆಯಲ್ಲಿರುವವರಿಗೆ, ಅಧಿಕಾರದಲ್ಲಿರುವವರಿಗೆ ಸವಾಲು, ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಆದರೆ ಅನುಭವಗಳು ಬರುವುದು ಸಮಸ್ಯೆಗಳಿಂದಲೇ. ಇಲ್ಲದಿದ್ದರೆ ಜೀವನವೇ ನೀರಸವಾಗಿರುತ್ತದೆ. ಆದರೆ ಈ ಎಲ್ಲಾ ಸಮಸ್ಯೆ, ಸವಾಲುಗಳನ್ನು ಮೀರಿ ಮಂಗಳೂರು ವಿವಿಯಲ್ಲಿ ಕುಲಪತಿಯಾಗಿ ಸಮರ್ಥವಾಗಿ ಸೇವೆ ಸಲ್ಲಿಸಿರುವ ಯಡಪಡಿತ್ತಾಯರು ಅಭಿನಂದನೀಯರು ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಎನ್. ವಿನಯ್ ಹೆಗ್ಡೆ ಅವರು ಅಭಿನಂದನಾ ಭಾಷಣ ಮಾಡುತ್ತಾ, ಓರ್ವ ಯೋಗ್ಯ ವ್ಯಕ್ತಿ ಅರ್ಹ ಸ್ಥಾನಕ್ಕೆ ತಲುಪಿದರೆ ಯಾವ ರೀತಿಯ ಬದಲಾವಣೆ, ಅಭಿವೃದ್ಧಿ ಮಾಡಬಹುದು ಎಂಬುದನ್ನು ಅವರು ಕುಲಪತಿಯಾಗಿ ಮಾಡಿ ತೋರಿಸಿದ್ದಾರೆ. ಎಲ್ಲರ ಸುಖ ದುಃಖಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಅಧ್ಯಾಪಕರು ಕಡಿಮೆ ಇರುತ್ತಾರೆ. ಆದರೆ ಯಡಪಡಿತ್ತಾಯರು ಕುಲಪತಿಯಾಗಿ ಮಾನವೀಯ ಮೌಲ್ಯಗಳ ಮೂಲಕ ಸ್ಪಂದಿಸುವ ಶ್ರೇಷ್ಠ ಪ್ರಾಧ್ಯಾಪಕರಾಗಿ ಗುರುತಿಸಿದವರಾಗಿದ್ದಾರೆ. ಅಧ್ಯಾಪಕನಾಗಿ, ಶೈಕ್ಷಣಿಕ ತಜ್ಞನಾಗಿ, ಉತ್ತಮ ಆಡಳಿತಗಾರನಾಗಿ, ಸಮರ್ಥ ಮಾರ್ಗದರ್ಶಕರಾಗಿ, ವಿದ್ಯಾರ್ಥಿ ಸ್ನೇಹಿಯಾಗಿ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಜೊತೆಗೆ ವಿಶ್ವವಿದ್ಯಾಲಯದ ವರ್ಚಸ್ಸನ್ನು ಹೆಚ್ಚಿಸಿದ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಇವರ ಸೇವೆಯು ಸಮಾಜಕ್ಕೆ ಇನ್ನಷ್ಟು ಸಿಗುವಂತಾಗಲಿ ಎಂದು ಹಾರೈಸಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ನಾನು ಯಾವುದಾದರೂ ಕಿಂಚಿತ್ತು ಸಾಧನೆ ಮಾಡಿದ್ದರೆ ಅದಕ್ಕೆ ಕಾರಣ ಮಂಗಳೂರು ವಿಶ್ವವಿದ್ಯಾಲಯ. ಇಲ್ಲಿಯೇ ವಿದ್ಯಾರ್ಥಿಯಾಗಿದ್ದ ನಾನು ಪ್ರಾಧ್ಯಾಪಕನಾಗಿ ಪರಿಕ್ಷಾಂಗ ಕುಲಸಚಿವನಾಗಿ, ಕುಲಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನನ್ನ ಪಾಲಿಗೆ ಒದಗಿ ಬಂದಿರುವುದು ನನ್ನ ಭಾಗ್ಯ. ಇದು ದೇವಸಂಕಲ್ಪದಿಂದ ಸಾಧ್ಯವಾಗಿದೆ ಅಂತ ನಾನು ಭಾವಿಸಿದ್ದೇನೆ. ನಾನು ಸಾಯುವವರೆಗೆ ಮಂಗಳೂರು ವಿವಿಯ ಋಣವನ್ನು ತೀರಿಸುವ ಪ್ರಯತ್ನ ಮಾಡುತ್ತೇನೆ. ಹುದ್ದೆಯಿಂದ ನಿವೃತ್ತಿಯಾದರೂ ಸಮಾಜದ ಸೇವೆಯನ್ನು ಖಂಡಿತಾ ಮುಂದುವರಿಸುತ್ತೇನೆ ಎಂದರು.
ಮಂಗಳೂರು ವಿವಿ ಕಳೆದ ಅವಧಿಯಲ್ಲಿ ಸನ್ಮಾನಿಸಿದ ಸಾಧಕರ ಪರಿಚಯದ ಕೃತಿಯನ್ನು ಡಾ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಗೊಳಿಸಿದರು.
ಅಭಿನಂದನಾ ಸಮಿತಿ ಅಧ್ಯಕ್ಷರಾದ ಪ್ರೊ.ಶಿವಣ್ಣ ಅವರು ಸ್ವಾಗತಿಸಿದರು. ಪ್ರೊ.ಪಿ.ಎಲ್ .ಧರ್ಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಣಕಾಸು ಅಧಿಕಾರಿ ಪ್ರೊ.ಸಂಗಪ್ಪ ಅವರು ವಂದಿಸಿದರು. ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅವರು ನಿರೂಪಿಸಿದರು.