ನೆಲ್ಯಾಡಿ: ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಾಣ: ಗುತ್ತಿಗೆದಾರನ ಉಡಾಫೆತನ: ಜೂ.9ಕ್ಕೆ ಸಾರ್ವಜನಿಕ ಪ್ರತಿಭಟನೆಗೆ ನಿರ್ಧಾರ

ಶೇರ್ ಮಾಡಿ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ನೆಲ್ಯಾಡಿ ಪೇಟೆಯಲ್ಲಿ ಸಮರ್ಪಕವಾದ ರೀತಿಯಲ್ಲಿ ಚರಂಡಿಯನ್ನು ನಿರ್ಮಾಣ ಮಾಡದೆ ಇರುವುದರಿಂದ ಆಗುತ್ತಿರುವ ತೊಂದರೆ ಹಾಗೂ ಕಾಮಗಾರಿಗಳಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಗುತ್ತಿಗೆದಾರರಿಗೆ ಮನವಿಯನ್ನು ನೀಡಿದರು, ಗುತ್ತಿಗೆದಾರ ಉಡಾಫೆತನದಿಂದ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡದೆ ಇರುವ ಹಿನ್ನೆಲೆಯಲ್ಲಿ ಜೂ.9ರಂದು ನೆಲ್ಯಾಡಿಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆ ನಡೆಸಲು ಜೂ.3ರಂದು ನೆಲ್ಯಾಡಿ ಡಿಯೋನ್ ಸ್ಕ್ವೇರ್ ನಲ್ಲಿ ನೆಲ್ಯಾಡಿ-ಕೌಕ್ರಾಡಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಎ.ಕೆ.ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ನೆಲ್ಯಾಡಿ ಕಟ್ಟಡ ಮಾಲಕರ ಸಂಘ ಮತ್ತು ವರ್ತಕರ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.

ಚತುಷ್ಪಥ ಹೆದ್ದಾರಿಯ ಕಾಮಗಾರಿಯ ವೇಳೆ ಸರ್ವಿಸ್ ರಸ್ತೆಯ ಎರಡು ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಲಾಗಿದ್ದು, ಇದು ಅವೈಜ್ಞಾನಿಕವಾಗಿದ್ದು ಚರಂಡಿಯ ಒಳಗಡೆ ಮಣ್ಣಿನ ರಾಶಿ, ಸಿಮೆಂಟಿನ ತುಂಡು, ಮರದ ತುಂಡುಗಳು, ಕಸ ಕಟ್ಟಿ ಸೇರಿದಂತೆ ಇನ್ನಿತರೇ ತ್ಯಾಜ್ಯಗಳು ತುಂಬಿಕೊಂಡಿವೆ. ಇದರಿಂದಾಗಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ತೊಂದರೆ ಉಂಟಾಗಿದೆ. ಈ ಬಗ್ಗೆ ಗುತ್ತಿಗೆದಾರರಾದ ಕೆಎನ್ಆರ್ ಕನ್‌ಸ್ಟ್ರಕ್ಷನ್ ಕಂಪನಿ ಇಂಜಿನಿಯರ್ ಮಹೇಂದ್ರ ಸಿಂಗ್ ರವರನ್ನು ಸ್ಥಳ ಪರಿಶೀಲನೆ ನಡೆಸಲು ಬರಹ ಹೇಳಿ ಆಗಿರುವ ತೊಂದರೆಗಳ ಬಗ್ಗೆ ಸ್ಥಳದಲ್ಲಿ ತೋರಿಸಿ ತಿಳಿ ಹೇಳಲಾಗಿತ್ತು, ಅದರಂತೆ ಸಮಸ್ಯೆಗಳನ್ನು ವೀಕ್ಷಿಸಿದ ಅವರು ಜೂ.03ರೊಳಗೆ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಿಕೊಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಗುತ್ತಿಗೆದಾರ ಈವರೆಗೂ ಯಾವುದೇ ರೀತಿಯ ಕೆಲಸವನ್ನು ನಿರ್ವಹಿಸದೆ ಮನವಿಗೆ ಉಡಾಫೆತನವನ್ನು ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಆಗುತ್ತಿರುವ ತೊಂದರೆಯನ್ನು ಜೂ.9ರಂದು ಬೆಳಿಗ್ಗೆ 10 ಗಂಟೆಗೆ ನೆಲ್ಯಾಡಿ ಪೇಟೆಯಲ್ಲಿ ನೆಲ್ಯಾಡಿಯ ಶಾಲಾ ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳನ್ನು ಪಾಲ್ಗೊಳ್ಳುವಿಕೆಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ಪ್ರತಿಭಟನೆಯ ಕುರಿತು ಸಂಸದರಿಗೆ, ಪುತ್ತೂರು ಹಾಗೂ ಸುಳ್ಯದ ಶಾಸಕರಿಗೆ, ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್, ತಹಶೀಲ್ದಾರ್, ಸ್ಥಳೀಯ ಗ್ರಾಮ ಪಂಚಾಯತ್, ಪೋಲಿಸ್ ಇಲಾಖೆ ಗಳಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ನೆಲ್ಯಾಡಿ ಪೇಟೆಯಲ್ಲಿ ರಿಕ್ಷಾ, ಜೀಪು ನಿಲ್ದಾಣ ವ್ಯವಸ್ಥೆ, ಚರಂಡಿಗಳಲ್ಲಿ ತ್ಯಾಜ್ಯ ಹಾಗೂ ಇನ್ನಿತರ ವಸ್ತುಗಳು ತುಂಬಿಕೊಂಡಿದ್ದು ಅದನ್ನು ತೆರವುಗೊಳಿಸಬೇಕು. ಡ್ರೈನೇಜ್‌ನ ಮೇಲ್ಭಾಗದ ಫೂಟ್‌ಪಾತ್‌ಗಳ ಮುಚ್ಚಳ ಹಾಕಬೇಕು. ಹೆದ್ದಾರಿ ನೀರು ಡ್ರೈನೇಜ್ ಮೂಲಕವೇ ಹರಿದು ಹೋಗಲು ಸೂಕ್ತ ಕ್ರಮ ಕೈಗೊಳ್ಳಬೇಕು, ಪೇಟೆಯ ಸರ್ವೀಸ್ ರಸ್ತೆಯ ಡ್ರೈನೇಜ್‌ಗೆ ಹೊಸವಲಯದಿಂದ ಬರುವ ಲಿಂಕ್ ರಸ್ತೆಗಳ ಡ್ರೈನೇಜ್ ವ್ಯವಸ್ಥೆಯನ್ನು ಸರಿಪಡಿಸಿಕೊಡುವುದು. ಸರ್ವೀಸ್ ರೋಡ್‌ಗಳಿಗೆ ಹೊರವಲಯದಿಂದ ಬರುವ ಲಿಂಕ್ ರಸ್ತೆಗಳ ಕಾಮಗಾರಿಯನ್ನು ಸಮರ್ಪಕ ರೀತಿಯಲ್ಲಿ ಮಾಡಿಕೊಡುವುದು, ಕೆಲವು ಕಟ್ಟಡಗಳ ಮುಂಭಾಗದಲ್ಲಿ ವಾಹನ ಪಾರ್ಕಿಂಗ್ ಗೆ ಅವಕಾಶವಿದ್ದು, ಚರಂಡಿಯ ಅಸಮರ್ಪಕ ನಿರ್ಮಾಣದಿಂದ ವಾಹನ ಪಾರ್ಕಿಂಗ್ ಗೆ ತೊಂದರೆಯಾಗಿದ್ದು ಇದನ್ನು ಸರಿಪಡಿಸುವುದು ಸೇರಿದಂತೆ ಕಾಮಗಾರಿಯಿಂದ ಆಗಿರುವ ಇನ್ನಿತರ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮೂಲಕ ಗುತ್ತಿಗೆದಾರರ ಗಮನ ಸೆಳೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ-ಕೌಕ್ರಾಡಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷ ಎ.ಕೆ.ವರ್ಗೀಸ್, ಉಪಾಧ್ಯಕ್ಷ ಗಣೇಶ್ ಕೆ. ರಶ್ಮಿ, ಸತೀಶ್ ದುರ್ಗಾಶ್ರೀ, ಮೋಹನ್ ದೋಂತಿಲ, ಜಾನ್ ಪಿ.ಎಸ್.ಸಂಘದ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಹೊಸವಕ್ಲು ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!