ಪುತ್ತೂರು: ಮರದ ದಿಮ್ಮಿಗಳನ್ನು ಜೇಸಿಬಿ ಸಹಾಯದಿಂದ ಟಿಪ್ಪರ್ ಗೆ ತುಂಬಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ದಿಮ್ಮಿ ಮೈಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಪಡುವನ್ನೂರು ಗ್ರಾಮದ ಸುಳ್ಯಪದವು ಎಂಬಲ್ಲಿ ಸಂಭವಿಸಿದೆ.
ಪಡುವನ್ನೂರು ಗ್ರಾಮದ ಸುಳ್ಯಪದವು ಬಟ್ಟಂಗಳ ನಿವಾಸಿ ಗೋಪಾಲಕೃಷ್ಣ ಮೃತಪಟ್ಟವರು.
ಇಂದು ಬೆಳಗ್ಗೆ ಗೋಪಾಲಕೃಷ್ಣ ಅವರು ಮನೆ ಸಮೀಪವಿದ್ದ ಮಾವಿನ ಮರದ ದಿಮ್ಮಿಗಳನ್ನು ಜೇಸಿಬಿ ಮೂಲಕ ಟಿಪ್ಪರ್ ಗೆ ಲೋಡ್ ಮಾಡುತ್ತಿದ್ದರು. ಈ ವೇಳೆ ಟಿಪ್ಪರ್ ನ ಹಿಂದಿನ ಬಾಗಿಲನ್ನು ಸರಿಪಡಿಸುತ್ತಿದ್ದ ಗೋಪಾಲಕೃಷ್ಣರ ಮೇಲೆ ಜೇಸಿಬಿಯಿಂದ ಜಾರಿದ ಮರದ ದಿಮ್ಮಿ ಬಿದ್ದಿದೆ ಎಂದು ತಿಳಿದುಬಂದಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಗೋಪಾಲಕೃಷ್ಣರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆ ದಿದ್ದರು.
ಸುಳ್ಯಪದವು ಕಾಂಗ್ರೆಸ್ ವಲಯಾಧ್ಯಕ್ಷರಾಗಿದ್ದ ಗೋಪಾಲಕೃಷ್ಣ ಬಡಗನ್ನೂರು ಗ್ರಾಪಂ ಮಾಜಿ ಸದಸ್ಯರಾಗಿದ್ದರು. ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಗೌರವಾಧ್ಯಕ್ಷರಾಗಿ, ಸುಳ್ಯಪದವು ಅಯ್ಯಪ್ಪ ಮಂದಿರದ ಬ್ರಹ್ಮ ಕಲಶೋತ್ಸವ ಸ್ವಾಗತ ಸಮಿತಿಯ ಸಂಚಾಲಕರಾಗಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ಉತ್ತಮ ಕೃಷಿಕರೂ ಆಗಿದ್ದರು.
ಮೃತರು ತಾಯಿ, ಪತ್ನಿ, ಮೂವರು ಮಕ್ಕಳ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.