ಗೃಹ ಜ್ಯೋತಿ ಉಚಿತ ವಿದ್ಯುತ್: ಬಾಡಿಗೆದಾರರ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

ಶೇರ್ ಮಾಡಿ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹ ಜ್ಯೋತಿ ಯೋಜನೆಯು ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಲಿದೆ. ಆದರೆ, ಈ ಯೋಜನೆಯು ಮನೆ ಮಾಲೀಕರಿಗೆ ಸುಲಭವಾಗಿ ಸಿಗುತ್ತದೆ. ಆದರೆ, ಮನೆಗಳಲ್ಲಿ ಬಾಡಿಗೆ ಇರುವವರಿಗೆ ಈ ಪ್ರಯೋಜನ ಪಡೆಯುವುದು ತುಸು ತಲೆಬಿಸಿಯ ವಿಚಾರವಾಗಿದೆ. ಏಕೆಂದರೆ, ಮನೆ ಮಾಲೀಕರು ತಾವು ಎಷ್ಟು ಮನೆಗಳನ್ನು ಬಾಡಿಗೆ ಕೊಟ್ಟಿದ್ದೇವೆ ಎಂಬುದನ್ನು ಘೋಷಿಸಿಕೊಳ್ಳಬೇಕಿದೆ ಹಾಗೂ ಆ ಮನೆಗಳಿಗೆ ಸೂಕ್ತವಾದ ಆಸ್ತಿ ತೆರಿಗೆ ಪಾವತಿರಿಸಬೇಕಿರುತ್ತದೆ. ಹಾಗಿದ್ದರೆ ಮಾತ್ರ ಬಾಡಿಗೆದಾರರಿಗೆ ಗೃಹ ಜ್ಯೋತಿ ಸೌಲಭ್ಯ ಸಿಗುತ್ತೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಬಾಡಿಗೆದಾರರು ಗೃಹ ಜ್ಯೋತಿ ಸೌಲಭ್ಯವನ್ನು ಪಡೆಯಲು ಏನೇನು ಮಾಡಬೇಕು ಎಂಬುದನ್ನು ಹೇಳಿದ್ದಾರೆ. ಅದರ ಆಧಾರದಲ್ಲಿ ಇಲ್ಲಿ ಬಾಡಿಗೆದಾರರ ಗೊಂದಲಗಳಿಗೆ ಉತ್ತರ ನೀಡಲಾಗಿದೆ.

ಒಂದು ಕಟ್ಟಡಕ್ಕೆ ಒಂದು ಗೃಹ ಜ್ಯೋತಿ ಯೋಜನೆಯೇ? ಅಧಿಕಾರಿಗಳು ಹೇಳೋದೇನು?
ಒಂದು ಕಟ್ಟಡಕ್ಕೆ ಒಂದೇ ಗೃಹ ಜ್ಯೋತಿ ಯೋಜನೆ ಎಂಬುದಾಗಿ ರಾಜ್ಯ ವಿದ್ಯುತ್ ನಿಗಮವು ಹೊರಡಿಸಿರುವ ಆದೇಶವು ಹಲವಾರು ಮಂದಿಯಲ್ಲಿ ಗೊಂದಲ ಉಂಟು ಮಾಡಿದೆ. ಈ ಬಗ್ಗೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಒಂದು ಮನೆಗೆ ಒಂದು ವಿದ್ಯುತ್ ಸೌಕರ್ಯ ಎಂಬರ್ಥದಲ್ಲಿ ಆದೇಶ ಪ್ರತಿಯನ್ನು ಮುದ್ರಿಸಿರುವುದರಿಂದ ಅದು ಹಲವರ ಗೊಂದಲಕ್ಕೆ ಕಾರಣವಾಗಿದೆ. ಅಸಲಿಗೆ, ಅದು ಒಂದು ಆರ್ ಆರ್ ಸಂಖ್ಯೆಗೆ ಒಂದು ಒಂದು ಕಟ್ಟಡದಲ್ಲಿ ಹಲವಾರು ಮನೆಗಳಿದ್ದರೂ ಅವುಗಳಿಗೆ ಪ್ರತ್ಯೇಕ ಮೀಟರ್ ಇರುತ್ತದೆ. ಅವುಗಳ ಆರ್ ಆರ್ ನಂಬರ್ ಗೆ ಬಾಡಿಗೆದಾರರು ಲಿಂಕ್ ಮಾಡಿದರೆ ಸಾಕು.

ಬಾಡಿಗೆ ಕರಾರು ಪತ್ರ, ಆದಾರ್ ಕಾರ್ಡ್ ಕಡ್ಡಾಯ
ಪ್ರತಿ ಮನೆಗೊಂದು ಪ್ರತ್ಯೇಕ ಮೀಟರ್ ಇದ್ದು, ಆ ಮೀಟರ್ ಗೆ ಆರ್ ಆರ್ ನಂಬರ್ (ರೆವಿನ್ಯೂ ರಿಜಿಸ್ಟರ್ ನಂಬರ್) ಕೊಡಲಾಗಿರುತ್ತದೆ. ಗೃಹ ಜ್ಯೋತಿ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ಬಾಡಿಗೆದಾರರು ತಮ್ಮ ಮನೆಯ ಮೀಟರ್ ನ ಆರ್ ಆರ್ ನಂಬರ್ ಗೆ ತಾವು ತಮ್ಮ ಮನೆ ಮಾಲೀಕರೊಂದಿಗೆ ಮಾಡಿಕೊಂಡಿರುವ ಬಾಡಿಗೆ ಕರಾರು ಪತ್ರದ ಜೆರಾಕ್ಸ್ ಪ್ರತಿಯನ್ನು ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ನೀಡಿ ಲಿಂಕ್ ಮಾಡಿಸಬೇಕು. ನಿಮಗೆ ವಿದ್ಯುತ್ ಸರಬರಾಜು ಮಾಡುವ ಅಧಿಕೃತ ಸಂಸ್ಥೆಯ (ಬೆಸ್ಕಾಂ, ಚೆಸ್ಕಾಂ ಇತ್ಯಾದಿ) ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು. ಒಂದು ವೇಳೆ ನೀವು ಲೀಸ್ ನಲ್ಲಿದ್ದರೆ ಆ ಲೀಸ್ ಅಗ್ರಿಮೆಂಟ್ ಜೆರಾಕ್ಸ್ ಪ್ರತಿಯನ್ನು ಅಪ್ಲೋಡ್ ಮಾಡಬೇಕಿರುತ್ತದೆ.

ಮನೆ ಮಾಲೀಕರ ಹೆಸರಿನಲ್ಲಿ ಹಲವಾರು ಮೀಟರ್ ಗಳಿದ್ದಾಗ ಹೇಗೆ?
ಒಬ್ಬ ವ್ಯಕ್ತಿಯು ಹಲವಾರು ಮನೆಗಳನ್ನು ಹೊಂದಿದ್ದು, ತನ್ನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ವಿದ್ಯುತ್ ಸಂಪರ್ಕಗಳನ್ನು ಪಡೆದುಕೊಂಡಿದ್ದರೆ ಅವರ ಹೆಸರಿನಲ್ಲಿಯೇ ಎಲ್ಲಾ ಬಾಡಿಗೆ ಮನೆಗಳ ವಿದ್ಯುತ್ ಮೀಟರ್ ಇರುತ್ತದೆ. ಆ ಎಲ್ಲಾ ಮೀಟರ್ ಗಳ ವಿದ್ಯುತ್ ಬಿಲ್ ಗಳು ಅವರ ಹೆಸರಿನಲ್ಲೇ ಬರುತ್ತಿರುತ್ತವೆ.

ಮಾಲೀಕರು ವಾಸಿಸುವ ಮನೆಯಲ್ಲಿನ ಮೀಟರ್ ನ ಆರ್.ಆರ್. ನಂಬರಿಗೆ ಅವರು ಲಿಂಕ್ ಮಾಡಿಸಿಕೊಳ್ಳುತ್ತಾರೆ. ಇನ್ನು ಉಳಿದ ಬಾಡಿಗೆ ಮನೆಗಳಲ್ಲಿರುವ ಮೀಟರ್ ಗಳಿಗೆ ಆಯಾ ಬಾಡಿಗೆದಾದರರು ತಮ್ಮ ಬಾಡಿಗೆ ಕರಾರು ಪತ್ರವನ್ನು, ಆಧಾರ್ ಕಾರ್ಡ್ ಅನ್ನು ನಿಮಗೆ ವಿದ್ಯುತ್ ಸರಬರಾಜು ಮಾಡುತ್ತಿರುವ ಅಧಿಕೃತ ಕಂಪನಿಗಳ (ಅಂದರೆ, ಬೆಸ್ಕಾಂ, ಚೆಸ್ಕ್, ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ.. ಇತ್ಯಾದಿ) ಅಧಿಕೃತ ವೆಬ್ ಸೈಟ್ ಗಳಲ್ಲಿ ಅಪ್ಲೋಡ್ ಮಾಡಬೇಕು. ಜೊತೆಗೆ, ​ ನಿಮಗೆ ಬಾಡಿಗೆ ನೀಡಲಾಗಿದೆ ಎಂದು ನಿಮ್ಮ ಮಾಲೀಕರು ನೀಡಿರುವ ಡಿಕ್ಲರೇಷನ್ ಕಾಪಿಯನ್ನು ಸಹ ಅಪ್ಲೋಡ್ ಮಾಡಬೇಕು. ​

ಮನೆ ಮಾಲೀಕರಿಂದ ಬಾಡಿಗೆ ಮನೆಗಳ ಡಿಕ್ಲರೇಷನ್ ಕಡ್ಡಾಯ
ಇದು ಬಹಳ ಪ್ರಮುಖವಾದ ವಿಷಯ. ಮನೆ ಮಾಲೀಕರು, ತಾವು ಎಷ್ಟು ಮನೆಗಳನ್ನು ಬಾಡಿಗೆ ಕೊಟ್ಟಿದ್ದೇವೆ ಎಂಬುದರ ವಿವರಗಳನ್ನು ವಿದ್ಯುತ್ ಇಲಾಖೆಗೆ ಸಲ್ಲಿಸುವುದು ಕಡ್ಡಾಯ ಎಂದು ನಿಯಮಗಳು ಹೇಳುತ್ತವೆ. ನಮ್ಮ ಮಾಲೀಕತ್ವದ ಇಷ್ಟು ಮನೆಗಳು ಇಂತಿಂಥ ಪ್ರಾಂತ್ಯದಲ್ಲಿ ಬಾಡಿಗೆಗೆ ಕೊಟ್ಟಿರುತ್ತೇವೆ. ಅವುಗಳಿಗೆ ವಿದ್ಯುತ್ ಸಂಪರ್ಕ ಇದ್ದು ಅವುಗಳ ಆರ್.ಆರ್. ನಂಬರ್ ಹೀಗಿವೆ ಎಂಬ ವಿಚಾರವನ್ನು ಅವರು ಬಾಂಡ್ ಪೇಪರ್ ಮೇಲೆ ನಮೂದಿಸಿ ಅದನ್ನು ಡಿಕ್ಲೇರ್ ಮಾಡಿಕೊಂಡಿರಬೇಕು. ಅಲ್ಲದೆ, ಆ ಬಾಡಿಗೆ ಮನೆಗಳಿಗೆ ಸಲ್ಲಿಸಬೇಕಾದ ಆಸ್ತಿ ತೆರಿಗೆಯನ್ನು ಕಡ್ಡಾಯವಾಗಿ ಮನೆ ಮಾಲೀಕರು ಪಾವತಿಸಿರಬೇಕು. ಹಾಗಿದ್ದರೆ ಮಾತ್ರ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಸಿಗಲಿದೆ.

ಪ್ರತಿ 11 ತಿಂಗಳಿಗೆ ಬಾಡಿಗೆ ಕರಾರು ಪತ್ರ ಪರಿಷ್ಕರಣೆ ಅನಿವಾರ್ಯ
ಬಾಡಿಗೆದಾರರು ತಮ್ಮ ಮನೆಯ ಮೀಟರ್ ನ ಆರ್.ಆರ್. ನಂಬರ್ ಗೆ ಮನೆ ಬಾಡಿಗೆ ಕರಾರು ಪತ್ರ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಿ ಲಿಂಕ್ ಮಾಡಿಸಿದರಷ್ಟೇ ಸಾಲದು. ಬಾಡಿಗೆ ಕರಾರು ಅವಧಿ ಅಂತ್ಯವಾದ ಕೂಡಲೇ ಹೊಸ ಕರಾರು ಪತ್ರ ಮಾಡಿಸಿ ಅದನ್ನೂ ವಿದ್ಯುತ್ ಇಲಾಖೆಗೆ ಸಲ್ಲಿಸಬೇಕಿರುತ್ತದೆ. ಏಕೆಂದರೆ, ಬಾಡಿಗೆ ಕರಾರು ಅವಧಿಯು 11 ತಿಂಗಳದ್ದಾಗಿರುತ್ತದೆ. ಹಾಗಾಗಿ, ಅದರ ಅವಧಿ ಮುಗಿಯುವಷ್ಟರಲ್ಲಿಯೇ ಹೊಸ ಬಾಡಿಗೆ ಕರಾರು ಪತ್ರದ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕಿದೆ.
ಇನ್ನು ನಿಮ್ಮದು ಲೀಸ್ (ಭೋಗ್ಯ) ಅಗ್ರಿಮೆಂಟ್ ಆಗಿದ್ದರೆ ಅದರ ಅವಧಿ 2 ವರ್ಷದವರೆಗೆ ಇರುತ್ತದೆ. ಹಾಗಾಗಿ, ಪ್ರತಿ 2 ವರ್ಷಗಳಿಗೊಮ್ಮೆ ಅದನ್ನೂ ಸಹ ಬದಲಾಯಿಸಬೇಕಿರುತ್ತದೆ.

ಮನೆ ಬದಲಾಯಿಸುವಾಗ ಏನು ಮಾಡಬೇಕು?
ನೀವೊಂದು ಬಾಡಿಗೆ ಮನೆಯಲ್ಲಿ ಇರುತ್ತೀರಿ. ಗೃಹ ಜ್ಯೋತಿ ಸೌಲಭ್ಯಕ್ಕಾಗಿ ನಿಮ್ಮ ಮನೆಯ ಮೀಟರ್ ನ ಆರ್ ಆರ್ ಸಂಖ್ಯೆಗೆ ನಿಮ್ಮ ಆಧಾರ್ ಕಾರ್ಡ್ ಹಾಗೂ ಮನೆ ಬಾಡಿಗೆ ಕರಾರು ಪತ್ರ ಲಿಂಕ್ ಮಾಡಿರುತ್ತೀರಿ. ನೀವು ಆ ಬಾಡಿಗೆ ಮನೆಯನ್ನು ಬಿಡಬೇಕಾದ ಪ್ರಸಂಗ ಬಂದಾಗ, ಮರೆಯದೇ ವಿದ್ಯುತ್ ಇಲಾಖೆಗೆ ಆ ಬಗ್ಗೆ ಮಾಹಿತಿ ನೀಡಬೇಕು. ಆರ್ ಆರ್ ನಂಬರಿಗೆ ಲಿಂಕ್ ಆಗಿರುವ ಮನೆ ಬಾಡಿಗೆ ಕರಾರು ಹಾಗೂ ಆಧಾರ್ ಸಂಖ್ಯೆಗಳನ್ನು ಡಿಲೀಟ್ ಮಾಡಬೇಕಿರುತ್ತದೆ. ಹಾಗೆ ಮಾಡಿದರೆ ನೀವು ಬೇರೆ ಮನೆಗೆ ಹೋದಾಗ ಹೊಸದಾಗಿ ಆ ಮನೆಯ ಮೀಟರ್ ಗೆ ಹೊಸ ಬಾಡಿಗೆ ಕರಾರು ಪತ್ರ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಅನುಕೂಲವಾಗುತ್ತದೆ. ಹಾಗೆಯೇ ಹೊಸ ಬಾಡಿಗೆ ಮನಗೆ ಹೋದಾಗ, ಅಲ್ಲಿ ಮೊದಲಿದ್ದ ಬಾಡಿಗೆದಾರರು ಆ ಮನೆಯ ಆರ್ ಆರ್ ಸಂಖ್ಯೆಗೆ ಅವರ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಹಾಗೇ ಬಿಟ್ಟಿದ್ದರೆ ಅದನ್ನು ಬದಲಾಯಿಸಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಬಾಡಿಗೆ ಕರಾರು ಪತ್ರದ ಜೊತೆಗೆ ಲಿಂಕ್ ಮಾಡಿಸಬೇಕು.

Leave a Reply

error: Content is protected !!