ಮಂಗಳೂರು : ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತೇವೆ. ಅದಕ್ಕೆ ಸಮರ್ಥ ಅಧಿಕಾರಿಯನ್ನು ನೇಮಕ ಮಾಡುತ್ತೇವೆ. ಕರ್ನಾಟಕದಲ್ಲಿ ನೈತಿಕ ಪೊಲೀಸ್ ಗಿರಿ ನಡೆಯಲು ಅವಕಾಶವೇ ಕೊಡಬಾರದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವ ಸಮೂಹದ ಡ್ರಗ್ಸ್ ಮಾಫಿಯಾಗೆ ಬಲಿಯಾಗಿದೆ. ಡ್ರಗ್ಸ್ ದಂಧೆ ತಡೆಯೋಕೆ ಆಗದ ರೀತಿಯಲ್ಲಿ ಬೆಳೆಯುತ್ತಿದೆ. ಆಗಸ್ಟ್ 15ರ ಒಳಗೆ ಕರಾವಳಿಯನ್ನು ಡ್ರಗ್ಸ್ ಮುಕ್ತ ಮಾಡಬೇಕು, ಎಲ್ಲೂ ಮಾದಕ ದ್ರವ್ಯ ಸಿಗದಂತೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಕರಾವಳಿ ಭಾಗದಲ್ಲಿ ಕೋಮು ಸಾಮರಸ್ಯ ತರಲು ಸೂಚನೆ ನೀಡಿದ್ದೇನೆ. ನೈತಿಕ ಪೊಲೀಸ್ಗಿರಿ ನಡೆದರೆ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ನೈತಿಕ ಪೊಲೀಸ್ಗಿರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದೇನೆ ಎಂದು ಹೇಳಿದರು.
ಕೇವಲ ಕರಾವಳಿ ಅಷ್ಟೇ ಅಲ್ಲದೇ ಕೋಮು ವೈಷಮ್ಯ ಇರುವ ಕಡೆ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತೇವೆ. ಅದರ ರೂಪುರೇಷೆಯನ್ನು ಕಮಿಷನರ್ ತಯಾರಿಸುತ್ತಾರೆ. ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆಯ ಮುಖ್ಯ ಉದ್ದೇಶ ನೈತಿಕ ಪೊಲೀಸ್ಗಿರಿ ಹತ್ತಿಕ್ಕುವುದು. ಮೊದಲಿಗೆ ಮಂಗಳೂರು ಕಮಿಷನರ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತೇವೆ. ಇಲ್ಲಿ ಯಶಸ್ವಿಯಾದರೆ ಬಳಿಕ ರಾಜ್ಯಾದ್ಯಂತ ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು, ಸರ್ವ ಜನಾಂಗದ ಶಾಂತಿಯ ತೋಟ ಎಂದು ಪ್ರಣಾಳಿಕೆ ಭರವಸೆ ಕೊಟ್ಟಿದ್ದೇವೆ. ಶಾಂತಿಯ ತೋಟಕ್ಕೆ ತೊಂದರೆ ನೀಡುವ ಕೆಲಸ ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ನಡೆಯುತ್ತಿದೆ. ನಮಗೆ ರಾಜ್ಯದಲ್ಲಿ ಕೋಮು ಸಾಮರಸ್ಯ ಇರಬೇಕು. ಯಾರು ಪ್ರಚೋದನೆ ಮಾಡ್ತಾರೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಮ್ಮಲ್ಲಿ ಕಾನೂನುಗಳಿವೆ ಎಂದು ಹೇಳಿದರು.
ಪಶ್ಚಿಮ ವಲಯದ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ
ಇನ್ನು, ಗೃಹ ಸಚಿವ ಜಿ ಪರಮೇಶ್ವರ್ ಅವರು ಪಶ್ಚಿಮ ವಲಯದ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನೈತಿಕ ಪೊಲೀಸ್ಗಿರಿ, ಕರಾವಳಿಯಲ್ಲಿ ಹೆಚ್ಚಿದ ಡ್ರಗ್ ಮಾಫಿಯಾ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಪರಮೇಶ್ವರ್ ಚರ್ಚಿಸಿದರು, ಗೃಹ ಸಚಿವರಾದ ಬಳಿಕ ಮೊದಲ ಬಾರಿಗೆ ಕರಾವಳಿಗೆ ಆಗಮಿಸಿದ ಡಾ ಜಿ ಪರಮೇಶ್ವರ್ ಅವರನ್ನು ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಚಂದ್ರಗುಪ್ತ, ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ವಾಗತಿಸಿದರು. ಈ ವೇಳೆ ದಕ್ಷಿಣ ಕನ್ನಡ ಎಸ್ಪಿ ರಿಷ್ಯಂತ್, ಉಡುಪಿ ಎಸ್ಪಿ ಅಕ್ಷಯ್, ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ್, ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಇದ್ದರು.