ಕನ್ನಡ ರತ್ನ ಗೋಪಾಲಕೃಷ್ಣ ಶಗ್ರಿತ್ತಾಯ ಅಲ್ಪಕಾಲದ ಅಸೌಖ್ಯದಿಂದ ನಿಧನ

ಶೇರ್ ಮಾಡಿ

ನೆಲ್ಯಾಡಿ: ಪುತ್ತೂರು ಶಾಂತಿಗೋಡು ಪುಂಡಿಕಾಯಿ ಯ ಜ್ಯೋತಿಷಿ, ನಿವೃತ್ತ ಶಿಕ್ಷಕ, ಮಕ್ಕಳ ಸಾಹಿತಿ,ಯಕ್ಷಗಾನ ಅರ್ಥಧಾರಿ, ಯಕ್ಷಗಾನ ಮಕ್ಕಳ ಮೇಳ ಸಂಘಟಕ, ಕನ್ನಡ ರತ್ನ ಗೋಪಾಲಕೃಷ್ಣ ಶಗ್ರಿತ್ತಾಯ(87) ಇವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಬೆಳಗ್ಗೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ರಾಮಕುಂಜ ಓರಿಯಂಟಲ್ ಹೈಸ್ಕೂಲ್ ನಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದ ಇವರು ನಂತರ ಪಡುಬೆಟ್ಟು, ಹೊಸ್ತೋಟ, ಶಿರಾಡಿ ಮುಂತಾದ ಶಾಲೆಗಳಲ್ಲಿ ಮುಖ್ಯೋಪಾದ್ಯಾಯರಾಗಿ ಶಿಕ್ಷಕ ವೃತ್ತಿ ನಡೆಸಿ ನಿವೃತ್ತರಾಗಿದ್ದರು. ಯಕ್ಷಗಾನ ರಂಗದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಹನ್ನೆರಡು ವರ್ಷದೊಳಗಿನ ಬಾಲಕಲಾವಿದರುಗಳನ್ನೇ ಸಂಘಟಿಸಿ ಪಡುಬೆಟ್ಟು ಶ್ರೀ ಬಾಲಸುಬ್ರಹ್ಮಣ್ಯ ಯಕ್ಷಗಾನ ಬಾಲಕಲಾವಿದರುಗಳ ಸಂಘದ ಮೂಲಕ ರಾಜ್ಯವ್ಯಾಪಿ ಯಕ್ಷಗಾನ ಕಾರ್ಯಕ್ರಮಗಳನ್ನ ನೀಡಿ ಯಕ್ಷಗಾನದಲ್ಲಿ ಸಂಪೂರ್ಣ ಮಕ್ಕಳ ಮೇಳವನ್ನ ರಚಿಸಿದ ದಂತಕಥೆಯಾಗಿದ್ದಾರೆ. ಮಕ್ಕಳ ಕವಿತೆಗಳ ರಚನೆಗಳ ಮೂಲಕ ಹದಿನೈದಕ್ಕೂ ಮಿಕ್ಕಿ ಪುಸ್ತಕಗಳನ್ನ ರಚಿಸಿದ್ದಾರೆ. ಪ್ರಸಕ್ತ ಮೂರನೇ ತರಗತಿಯ ಪಠ್ಯಪುಸ್ತಕದಲ್ಲಿ ಇವರ ಸ್ವರಚಿತ ಕಪ್ಪೆಯ ಹಾಡು ಪ್ರಕಟಗೊಂಡಿದೆ. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಯಕ್ಷಗಾನ ರಂಗದಲ್ಲಿ ಅನೇಕ ತನ್ನ ಶಿಷ್ಯವರ್ಗವನ್ನ ತಯಾರು ಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇವರ ಮಕ್ಕಳ ಸಾಹಿತ್ಯ ಸೇವೆ ಮತ್ತು ಯಕ್ಷಗಾನ ರಂಗದ ಸೇವೆಯನ್ನ ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನ ಗೌರವಿಸಿದೆ‌.
ಮೃತರಿಗೆ ಪತ್ನಿ,ಇಬ್ಬರು ಪುತ್ರಿಯರು, ಪುತ್ರರು ಇದ್ದಾರೆ.

Leave a Reply

error: Content is protected !!