ನೆಲ್ಯಾಡಿ: ಕಡಬ ತಹಶೀಲ್ದಾರ್, ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಹೆದ್ದಾರಿ ಪಕ್ಕ ನಿರ್ಮಿತವಾಗಿದ್ದ ಅಕ್ರಮ ವಾಣಿಜ್ಯ ಕಟ್ಟಡ ತೆರವು

ಶೇರ್ ಮಾಡಿ

ನೆಲ್ಯಾಡಿ: ಮಂಗಳೂರು-ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಲಾವತ್ತಡ್ಕ ಎಂಬಲ್ಲಿ ಗುಂಡ್ಯ ನದಿಗೆ ಅಕ್ರಮವಾಗಿ ಮಣ್ಣು ತುಂಬಿಸಿ ನದಿ ಒತ್ತುವರಿ ಮಾಡಿಕೊಂಡು ನಡೆಸುತ್ತಿದ್ದ ಜನನಿ ಎಂಬ ಹೆಸರಿನ ಹೋಟೆಲ್ ನ್ನು ಕಡಬ ತಹಶೀಲ್ದಾರ್ ರಮೇಶ್ ಬಾಬು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಜೂ.6 ರಂದು ತೆರವುಗೊಳಿಸಿದರು.

ಏನಿದು ಪ್ರಕರಣ?
“ಕಳೆದ ಹಲವು ವರ್ಷಗಳಿಂದ ಇಚಿಲಂಪಾಡಿಯ ಸತೀಶ್ ಎಂಬಾತ ಅಕ್ರಮ ವಾಣಿಜ್ಯ ಕಟ್ಟಡ ನಿರ್ಮಿಸಿ ಅದರಲ್ಲಿ ಹೋಟೆಲ್ ನ ಹೆಸರಿನಲ್ಲಿ ಅಕ್ರಮ ವ್ಯವಹಾರಗಳು ನಡೆಸುತ್ತಿದ್ದ ಕುರಿತು ಅನೇಕ ಬಾರಿ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ದಾಳಿ ನಡೆಸಿದಾಗ ಅಕ್ರಮ ಮದ್ಯ, ನದಿಯಲ್ಲಿ ಮೀನು ಹಿಡಿಯಲು ಬಳಸುವ ಸ್ಪೋಟಕವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿಂದೆ ಈತ ಸಣ್ಣ ತಳ್ಳುಗಾಡಿಯಲ್ಲಿ ಹೋಟೆಲ್ ನಡೆಯುತ್ತಿದ್ದ, ಕ್ರಮೇಣ ನದಿಯ ದಡಕ್ಕೆ ಮಣ್ಣು ಹಾಕಿ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿದ ದೊಡ್ಡ ಕಟ್ಟಡದಲ್ಲಿ ಪ್ರಾರಂಭವಾಗಿತ್ತು. ಈ ಕಟ್ಟಡಕ್ಕೆ ನೂಜಿಬಾಳ್ತಿಲ ಪಂಚಾಯತ್ ನಿಂದ ಪರವಾನಿಗೆ ಮತ್ತು ವಿದ್ಯುತ್ ಕನೆಕ್ಷನ್ ಗೆ ನಿರಾಕ್ಷೇಪಣಾ ಕೂಡ ನೀಡಲಾಗಿತ್ತು. ನಂತರ 2020ರಲ್ಲಿ ಮತ್ತೆ ಸಾರ್ವಜನಿಕರಿಂದ ಅಂಗಡಿಯ ಅಕ್ರಮಗಳ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ನಂತರ ನೂಜಿಬಾಳ್ತಿಲ ಪಂಚಾಯತ್ ನ ಆಗಿನ ಪಿಡಿಓ, ಕಡಬ ತಹಶೀಲ್ದಾರ್, ನೆಲ್ಯಾಡಿ ಮೆಸ್ಕಾಂ, ಗಣಿ ಮತ್ತು ಭೂವಿಜ್ಞಾನ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು
ಎಂದು ಸಾರ್ವಜನಿಕರು ತಿಳಿಸಿದರು.

ಸಾರ್ವಜನಿಕರಲ್ಲಿ ಅಸಮಾಧಾನ
ದೂರನ್ನು ಕೂಲಂಕುಷವಾಗಿ ಪರಿಶೀಲಿಸಿ ತೆರವುಗೊಳಿಸಲೆಂದು ಜೆಸಿಬಿ ಸಮೇತ ಬಂದಿದ್ದ ಅಧಿಕಾರಿಗಳು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಹೋಟೆಲ್ ನ ಕಟ್ಟಡದ ಎದುರಿನ ಬಾಗಿಲು ಮತ್ತು ಸಿಮೆಂಟ್ ಶೀಟ್ ಗಳನ್ನಷ್ಟೇ ಜೆಸಿಬಿಯಲ್ಲಿ ತೆರವುಗೊಳಿಸಲಾಗಿದೆ. ಅಕ್ರಮವಾಗಿ ನಿರ್ಮಿಸಿರುವ ಈ ಕಟ್ಟಡವನ್ನು ಪೂರ್ಣವಾಗಿ ನೆಲಸಮ ಮಾಡುವ ಬದಲು ಮೇಲಿಂದ ಮೇಲೆ ಜೆಸಿಬಿಯಿಂದ ಕೆಲಸ ಮಾಡಲಾಗಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.
ಈತನಿಗೆ ಇಚಿಲಂಪಾಡಿ ಸಮೀಪ ಸರಕಾರಿ ಜಾಗ ಮಂಜೂರಾಗಿದ್ದು, ಆಶ್ರಯ ಯೋಜನೆಯ ಮುಖಾಂತರ ವಾಸದ ಮನೆಯನ್ನು(ಮನೆ ನಂಬರ್ 210/1) ನಿರ್ಮಿಸಿದ್ದಾರೆ. ಲಾವತ್ತಡ್ಕ ಎಂಬಲ್ಲಿ ಅಕ್ರಮವಾಗಿಯೇ ಮನೆ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ ಎಂಬುದಾಗಿ ಸಾರ್ವಜನಿಕರ ಆರೋಪವಾಗಿದೆ.

ಈ ಬಗ್ಗೆ ಹಲವು ಬಾರಿ ಸಾರ್ವಜನಿಕರು ಅಕ್ರಮ ಕಟ್ಟಡದ ವಿರುದ್ಧ ದೂರು ದಾಖಲಿಸಿದಾಗಲೂ ಸ್ಥಳೀಯ ರಾಜಕೀಯ ನಾಯಕರ ಮತ್ತು ಕೆಲವು ಸರಕಾರಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ದೂರುಗಳನ್ನು ನಿರ್ಲಕ್ಷಿಸಲಾಗಿತ್ತು. ಈ ಬಾರಿ ತೆರವುಗೊಳಿಸಲು ಆದೇಶ ಇದ್ದರೂ ಸ್ಥಳಕ್ಕೆ ಬಂದಂತಹ ಅಧಿಕಾರಿಗಳು ಕಾಟಾಚಾರಕ್ಕೆ ಆದೇಶ ಪಾಲಿಸುವಂತೆ ನಾಟಕವಾಡಿದ್ದಾರೆ ಎಂದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿದೆ.

“ಲಾವತಡ್ಕ ಎಂಬಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು ಅಕ್ರಮ ವಾಣಿಜ್ಯ ಕಟ್ಟಡವನ್ನು ಜೆಸಿಬಿ ಮುಖಾಂತರ ತೆರವುಗೊಳಿಸಲಾಗಿದೆ. ವಾಸದ ಮನೆಯನ್ನು ಹಾಗೆ ಬಿಟ್ಟಿರುತ್ತೇವೆ. ಆತನಿಗೆ ಬೇರೊಂದು ಕಡೆ ಸರಕಾರಿ ಜಾಗದಲ್ಲಿ ನಿವೇಶನ ಮಂಜೂರಾಗಿ ನಿವೇಶನ ಇದ್ದಲ್ಲಿ, ಲಾವತಡ್ಕದಲ್ಲಿರುವ ಕಟ್ಟಡವನ್ನು ಕಾನೂನು ಪ್ರಕಾರ ಸಂಪೂರ್ಣವಾಗಿ ತೆರೆವುಗೊಳಿಸಲಾಗುವುದು”
-ಟಿ.ರಮೇಶ್ ಬಾಬು, ಕಡಬ ತಹಶೀಲ್ದಾರ್

Leave a Reply

error: Content is protected !!