ವೀಕೆಂಡ್ ಕೆ.ಎಸ್.‌ಆರ್.‌ಟಿ.ಸಿ ಬಸ್ ಗಳಲ್ಲಿ ಭಾರಿ ಜನಸಂದಣಿ

ಶೇರ್ ಮಾಡಿ

ಬೆಳ್ತಂಗಡಿ: ರಾಜ್ಯ ಸರಕಾರದ ಶಕ್ತಿ ಯೋಜನೆಯಿಂದಾಗಿ ಪುಣ್ಯ ಕ್ಷೇತ್ರಗಳಿಗೆ ಮಹಿಳೆಯರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಹೆಚ್ಚಿನ ಪುಣ್ಯಕ್ಷೇತ್ರಗಳಲ್ಲಿ ಎಲ್ಲೆಂದರಲ್ಲಿ ಮಹಿಳೆಯರೇ ತುಂಬಿಹೋಗಿದ್ದಾರೆ. ಮಹಿಳೆಯರಿಗೆ ಸರಕಾರಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದರಿಂದ ವೀಕೆಂಡ್‌ನಲ್ಲಿ ಎಲ್ಲಾ ಬಸ್‌ಗಳಲ್ಲಿ ಮಹಿಳೆಯರೇ ತುಂಬಿಹೋಗಿರುವುದು ಕಂಡು ಬರುತ್ತಿದೆ.

ಉತ್ತರ ಕರ್ನಾಟಕದಿಂದ ಅತಿ ಹೆಚ್ಚು ಮಹಿಳಾ ಭಕ್ತರು ಆಗಮಿಸಿದ್ದಾರೆ. ಧರ್ಮಸ್ಥಳ, ಸುಬ್ರಹ್ಮಣ್ಯ ದರ್ಶನಕ್ಕೆ ಸರಕಾರಿ ಬಸ್‌ನಲ್ಲೇ ಪ್ರಯಾಣಿಸುತ್ತಿದ್ದಾರೆ. ವೀಕೆಂಡ್‌ ಮಾತ್ರವಲ್ಲದೆ ಭಾನುವಾರ ಮಣ್ಣೆತ್ತಿನ ಅಮಾವಾಸ್ಯೆಯಾಗಿರುವುದರಿಂದಲೂ ಮಹಿಳೆಯರ ಸಂಖ್ಯೆ ಅಧಿಕವಾಗಿದೆ.

ಶನಿವಾರ ಹುಬ್ಬಳ್ಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದು ಎಲ್ಲಾ ಬಸ್‌ಗಳು ತುಂಬಿ ತುಳುಕಿವೆ. ಬಸ್‌ ಹತ್ತಲು ಮತ್ತು ಇಳಿಯಲು ಮಹಿಳೆಯರೇ ಹರ ಸಾಹಸ ಪಡುವಂತಾಗಿದೆ. ಮೊದಲಿಗೆ ಕಡಿಮೆ ಬಸ್‌ ವ್ಯವಸ್ಥೆ ಇದ್ದುದರಿಂದ ಬಸ್‌ ನಿಲ್ದಾಣದಲ್ಲಿ ಬಸ್‌ ಗಾಗಿ ನೂರಾರು ಪ್ರಯಾಣಿಕರು ಕಾದು ಕುಳಿತಿದ್ದರು. ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ 8 ಹೆಚ್ಚುವರಿ ಕೆ.ಎಸ್.‌ಆರ್.‌ಟಿ.ಸಿ ಬಸ್‌ಗಳನ್ನು ಸುಬ್ರಹ್ಮಣ್ಯಕ್ಕೆ ಬಿಡಲಾಗಿದೆ.

ಉಚಿತ ಬಸ್ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ಇದೇ ಮೊದಲ ಬಾರಿಗೆ ಧರ್ಮಸ್ಥಳಕ್ಕೆ ಆಗಮಿಸಿದ್ದು ಸಂತಸದಿಂದಿರುವುದು ಕಂಡು ಬಂತು. ನಾನು ಇದೇ ಮೂದಲ ಬಾರಿಗೆ ಧರ್ಮಸ್ಥಳಕ್ಕೆ ಬಂದಿದ್ದೇನೆ. ಈ ಹಿಂದೆ ದೇವಸ್ಥಾನಕ್ಕೆ ಬರಲು‌ ಆಗಿರಲಿಲ್ಲ. ಇದೀಗ ರಾಜ್ಯ ಸರಕಾರದ ಈ ಯೋಜನೆಯಿಂದ ಕುಟುಂಬ ಸಮೇತ ದೇವಸ್ಥಾನಕ್ಕೆ ಬಂದಿದ್ದೇವೆ. ಸರಕಾರದ ಯೋಜನೆ ಬಗ್ಗೆ ಖುಷಿಯಾಗ್ತಾ ಇದೆ, ಒಳ್ಳೆಯ ಯೋಜನೆ. ಆದರೆ ಬಸ್ ಗಳಲ್ಲಿ ಫುಲ್ ರಶ್ ಆಗಿ ಗೊಂದಲ ಆಗ್ತಿದೆ. ಅದೊಂದು ಬಿಟ್ಟರೆ ಬಹುತೇಕ ಪ್ರಯಾಣ ಖುಷಿ ಇದೆ. ದೇವರ ದರ್ಶನ ಪಡೆದು ಖುಷಿಯಾಗಿದೆ, ಮಹಿಳೆಯರ ಸಂಖ್ಯೆ ಹೆಚ್ಚಿದೆ. ಬಸ್ ಹತ್ತಲು ಹರ ಸಾಹಸ ಪಡಬೇಕಾಗಿದೆ ಎಂದರು.

-ನೂಕು -ನುಗ್ಗಲು-
ಇನ್ನೊಂದೆಡೆ ಕಿಟಕಿ ಬದಿಯ ಸೀಟಿಗಾಗಿ ನೂಕಾಟ-ತಳ್ಳಾಟ ನಡೆದಿರುವುದು ಕಂಡು ಬಂದಿದೆ. ಸೀಟಿನ ಬದಿಯ ಕಬ್ಬಿಣದ ಕಂಬಿಯನ್ನು ಕಿತ್ತು ಹಾಕಿದ ಘಟನೆಯೂ ನಡೆದಿದೆ. ಇತ್ತ ಒಂದೇ ಬಾಗಿಲು ಇರುವ ಬಸ್‌ಗಳಲ್ಲಿ ಹತ್ತಲು ಮತ್ತು ಇಳಿಯಲು ರಂಪಾಟ ನಡೆದಿದೆ. ಬಸ್ ನ ಕಿಟಕಿಗಳ ಮೂಲಕವು ಬಸ್ ಹತ್ತುವ ಪ್ರಯತ್ನಗಳು ನಡೆಯುತ್ತಿವೆ. ಪ್ರತೀ ಐದು ನಿಮಿಷಕ್ಕೊಂದು ಬಸ್ ಇದ್ದರೂ ಭಾರೀ ಜನಜಂಗುಳಿ ಇದ್ದು, ಬಸ್ ನ ಒಳಗಡೆ ಕಾಲಿಡುವುದಕ್ಕೂ ಆಗದಂತೆ ಬಸ್ಸುಗಳು ತುಂಬಿವೆ. ಹಲವು ಬಸ್‌ ಗಳಲ್ಲಿ ನಿಂತುಕೊಂಡೇ ಪ್ರಯಾಣ ಮಾಡುವ ಸ್ಥಿತಿಯೂ ಬಂದಿದೆ. ಹೆಚ್ಚುವರಿ ಬಸ್ ಹಾಕಿದ್ದರೂ ಸಾಕಾಗದೆ ಎಲ್ಲಾ ಬಸ್‌ಗಳು ತುಂಬಿಕೊಂಡೇ ಸಂಚರಿಸುತ್ತಿವೆ. ನಿತ್ಯ ಬಸ್ ಮೂಲಕ ಸಂಚರಿಸುವವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಬಸ್ ಸ್ಟ್ಯಾಂಡುಗಳು ಮಹಿಳೆಯರಿಂದಲೇ ತುಂಬಿ ಹೋಗಿವೆ.

Leave a Reply

error: Content is protected !!