ಗೃಹಜ್ಯೋತಿಗೆ ಇಂದಿನಿಂದ ಅರ್ಜಿ: ಸದ್ಯಕ್ಕೆ ದಾಖಲೆ ಕೇಳದ ಸರಕಾರ

ಶೇರ್ ಮಾಡಿ

ಐದು ಗ್ಯಾರಂಟಿಗಳ ಪೈಕಿ ಮತ್ತೂಂದು ಮಹತ್ವದ ಯೋಜನೆ “ಗೃಹಜ್ಯೋತಿ”ಗೆ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ರವಿವಾರ ಚಾಲನೆ ದೊರೆಯಲಿದೆ. ದಿನಕ್ಕೆ ಗರಿಷ್ಠ ಹತ್ತು ಲಕ್ಷ ಜನ ಅರ್ಜಿ ಸಲ್ಲಿಸುವ ಸಾಮರ್ಥ್ಯದೊಂದಿಗೆ ಸೇವಾ ಸಿಂಧು ಪೋರ್ಟಲ್‌ ಮುಕ್ತಗೊಳಿಸಲಾಗುತ್ತಿದೆ. ನೋಂದಣಿಯನ್ನು ಅತ್ಯಂತ ಸರಳಗೊಳಿಸಲಾಗಿದ್ದು, ಸದ್ಯಕ್ಕೆ ಕರಾರುಪತ್ರ ಸೇರಿದಂತೆ ಯಾವುದೇ ದಾಖಲೆಗಳನ್ನು ಕೇಳಿಲ್ಲ.

ಈಗಾಗಲೇ ಶಕ್ತಿ ಯೋಜನೆಗೆ ಚಾಲನೆ ದೊರಕಿದ್ದರೂ ಶಕ್ತಿ ಸ್ಮಾರ್ಟ್‌ ಕಾರ್ಡ್‌ಗಾಗಿ ನೋಂದಣಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಅದೇ ರೀತಿ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೂ ತಾಂತ್ರಿಕ ಕಾರಣ ಗಳಿಂದ ಚಾಲನೆ ಸಿಕ್ಕಿಲ್ಲ.

ಯೋಜನೆಯಡಿ ಪ್ರತೀ ಗೃಹ ಬಳಕೆದಾರರಿಗೆ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಸಲಾಗುತ್ತದೆ. ಸದ್ಯಕ್ಕೆ ಬಾಡಿಗೆದಾರರು ಕರಾರುಪತ್ರ ಮತ್ತಿತರ ದಾಖಲೆಗಳನ್ನು ಒದಗಿಸಬೇಕಾಗಿಲ್ಲ. ಆಧಾರ್‌ ಸಂಖ್ಯೆ, ಬಿಲ್‌ನಲ್ಲಿ ನೀಡಲಾದ ವಿದ್ಯುತ್‌ ಖಾತೆ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆ ನಮೂದಿಸಬೇಕು. ಇದರೊಂದಿಗೆ ಬಾಡಿಗೆ ದಾರರಲ್ಲಿದ್ದ ಆತಂಕ ಆರಂಭಿಕ ಹಂತದಲ್ಲಿ ನಿವಾರಣೆಯಾದಂತಾಗಿದೆ. ನೋಂದಣಿಗೆ ಕ್ಯುಆರ್‌ ಕೋಡ್‌ ಕೂಡ ನೀಡಲಾಗಿದ್ದು, ಅದನ್ನು ಸ್ಕ್ಯಾನ್‌ ಮಾಡಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸೇವಾ ಸಿಂಧುವಿನಲ್ಲಿ ಸುಮಾರು 200ಕ್ಕೂ ಅಧಿಕ ಸೇವೆಗಳನ್ನು ನೀಡಲು ಸಾಧ್ಯವಿದೆ. ಸರಕಾರದ ಬಹುತೇಕ ಯೋಜನೆಗಳನ್ನು ಇದರ ಮೂಲಕ ಒದಗಿಸಲಾಗುತ್ತಿದೆ. ಈಗ ಪ್ರಮುಖ ಗ್ಯಾರಂಟಿಗಳ ಫ‌ಲಾನುಭವಿಗಳಿಗೂ ಸೇವಾ ಸಿಂಧು ವೇದಿಕೆಯಾಗುತ್ತಿದೆ.

Leave a Reply

error: Content is protected !!